ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಅನಂತ್‍ಕುಮಾರ್ ಹೆಗಡೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.11- ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಸಂಸ್ಥೆಯಲ್ಲಿ ದೇಶದ್ರೋಹಿಗಳೇ ತುಂಬಿಕೊಂಡಿದ್ದಾರೆ ಎನ್ನುವ ಮೂಲಕ ಉತ್ತರಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಸಂಸದರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಿಎಸ್‍ಎನ್‍ಎಲ್ ಸಂಸ್ಥೆಯಲ್ಲಿ ದೇಶದ್ರೋಹಿಗಳೇ ತುಂಬಿಕೊಂಡಿದ್ದಾರೆ. ಅವರನ್ನು ಸರಿಪಡಿಸಲು ನಮ್ಮ ಸರ್ಕಾರಕ್ಕೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಂತಹಂತವಾಗಿ ಇದನ್ನು ತೆಗೆದುಹಾಕಿ ಖಾಸಗೀಕರಣಗೊಳಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ಬಿಎಸ್‍ಎನ್‍ಎಲ್ ನೆಟ್ವರ್ಕ್ ಬಗ್ಗೆ ಎಲ್ಲರೂ ಪ್ರಶ್ನೆ ಮಾಡುತ್ತಾರೆ. ಹೌದು, ಉತ್ತರ ಕನ್ನಡ ಜಿಲ್ಲೆಯೇ ಎಷ್ಟೋ ಉತ್ತಮ. ಬೆಂಗಳೂರಿಗೆ ಹೋದರೆ ಎಲ್ಲಿಯೂ ನೆಟ್ವರ್ಕ್ ಸಿಗುವುದಿಲ್ಲ. ದೆಹಲಿಗೆ ಹೋದರೆ ಅಲ್ಲಿ ಕೂಡ ನಮ್ಮ ಮನೆಯಲ್ಲಿ ಬಿಎಸ್‍ಎನ್‍ಎಲ್ ಬರುವುದಿಲ್ಲ ಎಂದು ಬಿಎಸ್‍ಎನ್‍ಎಲ್ ವಿರುದ್ಧ ಹರಿಹಾಯ್ದಿದ್ದಾರೆ.

ಬಿಎಸ್‍ಎನ್‍ಎಲ್ ಇಡೀ ದೇಶಕ್ಕೆ ಕಳಂಕವಾಗಿದೆ. ಹೀಗಾಗಿ ಅದನ್ನು ಮುಗಿಸುತ್ತಿದ್ದೇವೆ. ಅದರ ಹೂಡಿಕೆ ಹಿಂತೆಗೆವ ನೀತಿ ಮೂಲಕ ಮುಗಿಸುತ್ತಿದ್ದೇವೆ. ಬಹುತೇಕ ಖಾಸಗಿ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಆ ಜಾಗವನ್ನು ತುಂಬಿಕೊಳ್ಳಲಿದ್ದಾರೆ.

ಇದನ್ನು ಸರಿಪಡಿಸಲು ಸಾಧ್ಯವಾಗಿಲ್ಲ. ಅಷ್ಟೊಂದು ಜಿಡ್ಡು ಹಿಡಿದು ಹೋಗಿದೆ. ನಮ್ಮ ಸರ್ಕಾರಕ್ಕೂ ಆಗಿಲ್ಲ ಎಂದರೆ ಯೋಚನೆ ಮಾಡಿ ಎಷ್ಟು ಜಿಡ್ಡು ಹಿಡಿದಿರಬಹುದು ಎಂದು ಅನಂತ್ ಕುಮಾರ್ ಹೇಳಿದ್ದಾರೆ.ದೇಶದ್ರೋಹಿಗಳೇ ತುಂಬಿಕೊಂಡಿರುವ ವ್ಯವಸ್ಥೆ ಇದಾಗಿದೆ. ಈ ಶಬ್ಧದಲ್ಲಿ ನಿಖರತೆ ಇದೆ. ಮೊನ್ನೆ ಕಾರವಾರದಲ್ಲಿ ನಡೆದ ಸಭೆಯಲ್ಲಿ ಕೂಡ ಇದೇ ಶಬ್ಧ ಬಳಸಿ ಅಕಾರಿಗಳನ್ನು ಬೈದಿದ್ದೇನೆ.

ನೀವು ಸರ್ಕಾರಿ ಅಕಾರಿಗಳಲ್ಲ, ದೇಶದ್ರೋಹಿಗಳು. ಸರ್ಕಾರ ಹಣ ಕೊಡುತ್ತಿದೆ. ಜನರಿಗೆ ಅವಶ್ಯಕತೆ ಇದೆ. ಮೂಲಸೌಕರ್ಯವಿದೆ. ಎಲ್ಲವೂ ಇದೆ. ಆದರೂ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಇಲ್ಲಿ ಯಾವುದಕ್ಕೂ ಕೊರತೆಯಿಲ್ಲ. ಪ್ರಧಾನ ಮಂತ್ರಿ ಡಿಜಿಟಲ್ ಇಂಡಿಯಾ ಎನ್ನುತ್ತಿದ್ದಾರೆ. ಅದಕ್ಕೆ ಬೇಕಾದ ಹಣವನ್ನೂ ನೀಡುತ್ತಿದ್ದೇವೆ. ತಂತ್ರಜ್ಞಾನ ಕೂಡ ಸಿದ್ಧವಿದೆ. ಆದರೆ ಕೆಲಸ ಮಾಡಲು ಮಾತ್ರ ಸಿದ್ಧರಿಲ್ಲ. ಅಷ್ಟು ಮನೆಮುರುಕುತನ ಈ ಅಕಾರಿಗಳದ್ದು.

ಹೀಗಾಗಿ ನಾವು ತೀರ್ಮಾನ ಮಾಡಿದ್ದೇವೆ, ಇಡೀ ದೇಶದಲ್ಲಿ ಸುಮಾರು 85,000 ಜನರನ್ನು ಕೆಲಸದಿಂದ ತೆಗೆಯುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನರನ್ನು ತೆಗೆಯುವ ಅಗತ್ಯತೆ ಬರಬಹುದು. ಏನೇ ಆದರೂ ಸರಿ, ಮೇಜರ್ ಸರ್ಜರಿ ಮಾಡಿ ಬಿಎಸ್‍ಎನ್‍ಎಲ್‍ಅನ್ನು ಸರಿ ಮಾಡುತ್ತೇವೆ.

ಮುಂದೆ ಖಾಸಗೀಕರಣ ಮಾಡುತ್ತೇವೆ. ಅದೇ ದಾರಿ, ಬೇರೆ ಮಾರ್ಗವೇ ಇಲ್ಲ ಎಂದು ಹೇಳಿದ್ದಾರೆ.ಅನಂತ್ ಕುಮಾರ್ ಹೆಗಡೆ ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು , ಸಂಸದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ತಮ್ಮದೇ ಸರ್ಕಾರದ ಸ್ವಾಮ್ಯದಲ್ಲಿರುವ ಸಂಸ್ಥೆಯ ಅಕಾರಿಗಳನ್ನು ದೇಶದ್ರೋಹಿಗಳು ಎನ್ನುತ್ತಿದ್ದಾರೆ. ಖಾಸಗಿಯವರಿಗೆ ಲಾಭ ಮಾಡಿಕೊಡುವ ಸಲುವಾಗಿ ಸರ್ಕಾರ ಉದ್ದೇಶಪೂರ್ವಕವಾಗಿಯೇ ಬಿಎಸ್‍ಎನ್‍ಎಲ್‍ಅನ್ನು ಮುಗಿಸುತ್ತಿದೆ ಎಂದು ಆರೋಪಿಸಲಾಗಿದೆ.

Facebook Comments

Sri Raghav

Admin