ಅನಂತಕುಮಾರ ಸ್ವಾಮೀಜಿಗೆ ಭಾವಪೂರ್ಣ ವಿದಾಯ

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ,ಸೆ.9- ಇಹಲೋಕ ತ್ಯಜಿಸಿದ ಅಭಿನವ ಭಾರತಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅನಂತಕುಮಾರ ಸ್ವಾಮೀಜಿ ಅವರ ಅಂತ್ಯಕ್ರಿಯೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಶಂಕರಾನಗರದ ಅಭಿನವ ಭಾರತಿ ಕಾಲೇಜಿನ ಆವರಣದಲ್ಲಿ ಇಂದು ಮಧ್ಯಾಹ್ನ ನೆರವೇರಿತು.  ನಿನ್ನೆ ಸಂಜೆಯಿಂದಲೇ ಸಚಿವರು, ಶಾಸಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ವಿದ್ಯಾರ್ಥಿಗಳು ಆಗಮಿಸಿ ಅಂತಿಮ ದರ್ಶನ ಪಡೆದು ಶ್ರದ್ದಾಂಜಲಿ ಸಲ್ಲಿಸಿದರು.

ಸತ್ಯನಾರಾಯಣ-ಪಂಚಮಿದೇವಿ ದಂಪತಿ ಅವರ ಪುತ್ರ ಅನಂತ ಕುಮಾರ ಸ್ವಾಮೀಜಿ 1937ರ ಆ.3ರಂದು ಕಾಶಿಯಲ್ಲಿ ಜನಿಸಿದರು. ವಾರಣಾಸಿ ಮೂಲದ ಆಯುರ್ವೇದ ಪಂಡಿತರ ಕುಟುಂಬ ಇವರದು. ಆನಂದ ಮಾರ್ಗ ಸಂಘಟನೆ ಜೊತೆ ಗುರುತಿಸಿಕೊಂಡಿದ್ದ ಅವರು ತುರ್ತು ಪರಿಸ್ಥಿತಿ ಅವಧಿಯಲ್ಲೂ ಕೆಲಕಾಲ ಜೈಲಿನಲ್ಲಿದ್ದಾಗ ಅಲ್ಲಿಯೂ ಧ್ಯಾನ ಹೇಳಿಕೊಟ್ಟಿದ್ದ ಕೀರ್ತಿ ಅವರದು.

1963ರಲ್ಲಿ ಮನೆ ಬಿಟ್ಟು ಹೊರಬಂದ ಸ್ವಾಮೀಜಿ ಅವರು 1969ರಲ್ಲಿ ಮಂಡ್ಯಕ್ಕೆ ಆಗಮಿಸಿ ನೆಲೆಸಿದ್ದರು. ಯೋಗ, ಧ್ಯಾನ ತರಗತಿ ನಡೆಸುತ್ತಿದ್ದ ಅವರು ನಂತರ ವೆಂಕಟೇಶ್ವರ ಧ್ಯಾನ ಕೇಂದ್ರ ಸ್ಥಾಪಿಸಿದ್ದರು. 1977ರಲ್ಲಿ ಅಭಿನವ ವಿದ್ಯಾಭಾರತಿ ಎಂಬ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು.

ನಂತರದ ದಿನಗಳಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೂ ಅನುಕೂಲವಾಗಲೆಂಬ ಉದ್ದೇಶದಿಂದ 1992ರಲ್ಲಿ ಮಂಡ್ಯ ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ಶಿಕ್ಷಣ ಸಂಸ್ಥೆ ತೆರೆದರು. 1994ರಲ್ಲಿ ಮಂಡ್ಯ ತಾಲ್ಲೂಕಿನ ಹಳೇಬೂದನೂರು ಗ್ರಾಮದಲ್ಲಿ ಪ್ರೌಢಶಾಲೆ ಹಾಗೂ 1995ರಲ್ಲಿ ಕಾಳೇನಹಳ್ಳಿಯಲ್ಲಿ ವಿದ್ಯಾಸಂಸ್ಥೆ ಸ್ಥಾಪಿಸಿದರು. ಹಳ್ಳಿಗಳ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಹಳ್ಳಿಹಳ್ಳಿಗಳಿಗೂ ಶಿಕ್ಷಣ ಸಂಸ್ಥೆಗಳನ್ನು ವಿಸ್ತರಿಸಿದ್ದರು.

ಎಲ್ಲರಿಗೂ ಉತ್ತಮ ಶಿಕ್ಷಣ ನೀಡಲು ಹಲವು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದ ಅವರು ಯೋಗದಿಂದ ಉತ್ತಮ ಆರೋಗ್ಯ ಹಾಗೂ ಶಿಕ್ಷಣಕ್ಕೆ ಒತ್ತು ನೀಡಿದ್ದರು.
2010ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಅನಂತಕುಮಾರ್ ಸ್ವಾಮೀಜಿ ಭಾಜನರಾಗಿದ್ದರು.

Facebook Comments