ಪತ್ರಿಕೆಯೊಂದರ ಹಿರಿಯ ವರದಿಗಾರರೊಬ್ಬರನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಅಮರಾವತಿ(ಆಂಧ್ರಪ್ರದೇಶ),ಅ.16- ಆಂಧ್ರಪ್ರದೇಶದ ಪ್ರಮುಖ ದಿನಪತ್ರಿಕೆಯೊಂದರ ಹಿರಿಯ ವರದಿಗಾರರೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಆಂಧ್ರಜ್ಯೋತಿ ಪತ್ರಿಕೆಯ ಹಿರಿಯ ವರದಿಗಾರ ಕೆ.ಸತ್ಯನಾರಾಯಣ ಕೊಲೆಗೀಡಾದ ಪತ್ರಕರ್ತ.

ಪೂರ್ವ ಗೋದಾವರಿ ಜಿಲ್ಲೆಯ ಎಸ್.ಅಣ್ಣಾವರಂ ಗ್ರಾಮದ ಬಳಿ ಸತ್ಯನಾರಾಯಣ ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಹಾಕಿದರು. ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ಹಿರಿಯಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಮಹಾನಿರ್ದೇಶಕ ಗೌತಮ್ ಸವಾಂಗ್ ನಿನ್ನೆ ರಾತ್ರಿಯೇ ಪೂರ್ವ ಗೋದಾವರಿ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಅದ್ನಾನ್ ನಯೀಂ ಅಸ್ಮಿ ಅವರಿಗೆ ಸೂಚನೆ ನೀಡಿ ಹಂತಕರನ್ನು ಪತ್ತೆ ಮಾಡಿ ತಕ್ಷಣ ಬಂಧಿಸುವಂತೆ ಸೂಚಿಸಿದ್ದಾರೆ. ದುಷ್ಕರ್ಮಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಿ ಹಂತಕರನ್ನು ಶೀಘ್ರ ಬಂಧಿಸುವುದಾಗಿ ನಯೀಂ ತಿಳಿಸಿದ್ದಾರೆ.

ಸತ್ಯನಾರಾಯಣರ ಹತ್ಯೆಯನ್ನು ಆಂಧ್ರಪ್ರದೇಶ ವರದಿಗಾರರ ಒಕ್ಕೂಟ ಸೇರಿದಂತೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಖಂಡಿಸಿ ಹಂತಕರನ್ನು ಪತ್ತೆ ಮಾಡಿ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿವೆ

Facebook Comments