ಮಾದಕ ವಸ್ತು ಸಾಗಣೆ : ಆರೋಪಿಗೆ ಗುಂಡು, 7 ಕೆ.ಜಿ ಗಾಂಜಾ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಆನೇಕಲ್, ಸೆ.16- ಮಾದಕ ವಸ್ತು ಸಾಗಣೆ ಪ್ರಕರಣದಲ್ಲಿ ಬಂಧಿಸಲು ಹೋದ ಪೊಲೀಸರ ಮೇಲೆಯೇ ಕಲ್ಲಿನಿಂದ ಹಲ್ಲೆ ನಡೆಸಿದಾಗ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ತಗುಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ಅಯೂಬ್‍ ಖಾನ್ ಬಂಧಿತ ಆರೋಪಿ. ಈತನಿಂದ 7 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.

ತಾಲ್ಲೂಕಿನ ಬಿದರಗುಪ್ಪೆ ಗ್ರಾಮದ ಬಳಿ ಕಳ್ಳಹಳ್ಳಿ ಗ್ರಾಮದ ನಿವಾಸಿ ಅಯೂಬ್ ಖಾನ್ ಗಾಂಜಾ ತೆಗೆದುಕೊಂಡು ಹೋಗುತ್ತಿದ್ದಾನೆಂಬ ಮಾಹಿತಿ ಅತ್ತಿಬೆಲೆ ಪೊಲೀಸರಿಗೆ ಲಭಿಸಿದೆ. ತಕ್ಷಣ ಅತ್ತಿಬೆಲೆ ಠಾಣೆ ಇನ್‍ಸ್ಪೆಕ್ಟರ್ ಸತೀಶ್, ಪಿಎಸ್‍ಐ ಮುರಳಿ ಮತ್ತು ಸರ್ಜಾಪುರ ಪಿಎಸ್‍ಐ ಹರೀಶ್ ರೆಡ್ಡಿ ಸಿಬ್ಬಂದಿಯೊಂದಿಗೆ ತೆರಳಿದ್ದಾರೆ.

ಪೊಲೀಸರು ಸ್ಥಳಕ್ಕೆ ಬರುತ್ತಿರುವುದನ್ನು ಗಮನಿಸಿದ ಆರೋಪಿ ಅಯೂಬ್ ಖಾನ್ ಪೊಲೀಸರ ಮೇಲೆಯೇ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ತಕ್ಷಣ ಇನ್‍ಸ್ಪೆಕ್ಟರ್ ಸತೀಶ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಪೊಲೀಸರ ಮಾತಿಗೆ ಕಿವಿಗೊಡದೆ ಮತ್ತೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಇನ್‍ಸ್ಪೆಕ್ಟರ್ ಸತೀಶ್ ಅವರು ಹಾರಿಸಿದ ಗುಂಡು ಆರೋಪಿ ಕಾಲಿಗೆ ತಗುಲಿದೆ.

ತಕ್ಷಣ ಪೊಲೀಸರು ಆರೋಪಿಯನ್ನು ಸುತ್ತುವರಿದು ಗಾಂಜಾ ವಶಕ್ಕೆ ಪಡೆದು ಆನೇಕಲ್ ಸಂಚಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಕಾರ್ಯಾಚರಣೆ ವೇಳೆ ಪಿಎಸ್‍ಐ ಮುರಳಿ ಹಾಗೂ ಸಿಬ್ಬಂದಿಗೆ ಗಾಯವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಅಯುಬ್ ಖಾನ್ ಮೇಲೆ ಈಗಾಗಲೇ ಮಾದಕ ವಸ್ತು ಸಾಗಾಟ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ಗೊತ್ತಾಗಿದೆ.

Facebook Comments