ಆನೇಕಲ್ನಲ್ಲಿ ಕ್ವಾರಂಟೈನ್ ಸೆಂಟರ್ ಬೇಡ : ಸ್ಥಳೀಯರ ವಿರೋಧ
ಬೆಂಗಳೂರು, ಮೇ 16- ಆನೇಕಲ್ನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯನ್ನು ಕ್ವಾರಂಟೈನ್ ಕೇಂದ್ರವನ್ನಾಗಿ ಪರಿವರ್ತಿಸಲು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಶಾಲಾ ಮುಂಭಾಗದ ರಸ್ತೆಯನ್ನು ಬ್ಲಾಕ್ ಮಾಡಿ ಪ್ರತಿಭಟನೆ ನಡೆಸುತ್ತಿರುವ ಸ್ಥಳೀಯರು ಯಾವುದೇ ಕಾರಣಕ್ಕೂ ವಸತಿ ಶಾಲೆಯನ್ನು ಕ್ವಾರಂಟೈನ್ ಕೇಂದ್ರವನ್ನಾಗಿ ಪರಿವರ್ತಿಸಬಾರದು ಎಂದು ಒತ್ತಾಯಿಸಿದ್ದಾರೆ.
ಆನೇಕಲ್ನ ತೆಲಗರಹಳ್ಳಿ ಸಮೀಪದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕೆಲವರನ್ನು ಕ್ವಾರಂಟೈನ್ ಮಾಡಲು ತೀರ್ಮಾನಿಸಿ ನಾಲ್ಕು ಬಸ್ಗಳಲ್ಲಿ ಜನರನ್ನು ಸಾಗಿಸಲಾಗುತ್ತಿತ್ತು. ಈ ವಿಷಯ ತಿಳಿದ ಸ್ಥಳೀಯರು ವಸತಿ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಕುಳಿತು ಬಸ್ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.
ಆನೇಕಲ್ ತಾಲ್ಲೂಕಿನಲ್ಲಿ ಇದುವರೆಗೂ ಯಾವುದೇ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿಲ್ಲ. ಇಲ್ಲಿ ನಾವು ನೆಮ್ಮದಿಯಾಗಿದ್ದೇವೆ. ವಸತಿ ಶಾಲೆಯನ್ನು ಕ್ವಾರಂಟೈನ್ ಕೇಂದ್ರವನ್ನಾಗಿ ಪರಿವರ್ತಿಸಿ ಸೋಂಕು ಹರಡಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.