ಪೊಲೀಸರ ಮೇಲೆ ಎರಗಿದ ಹಂತಕರಿಗೆ ಗುಂಡೇಟು..!

ಈ ಸುದ್ದಿಯನ್ನು ಶೇರ್ ಮಾಡಿ

ಆನೇಕಲ್, ಸೆ.22- ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಇಬ್ಬರು ಕೊಲೆ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿಯುವಲ್ಲಿ ಹೆಬ್ಬಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ವೇಲು ಅಲಿಯಾಸ್ ಸೈಕೊ ವೇಲು ಹಾಗೂ ಬಾಲಕೃಷ್ಣ ಅಲಿಯಾಸ್ ಬಾಲು ಗುಂಡೇಟು ತಿಂದು ಸೆರೆಸಿಕ್ಕ ಆರೋಪಿಗಳು.

ಗುಂಡೇಟು ತಿಂದ ಆರೋಪಿಗಳು ಇತ್ತೀಚೆಗೆ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗೇನ ಅಗ್ರಹಾರದ ಬಳಿ ಶ್ವೇತಾ ಎಂಬ ಮಹಿಳೆಯನ್ನು ಬರ್ಬರವಾಗಿ ಕೊಂದು ಕೈಗೆ ಸಿಕ್ಕಿದ್ದನ್ನು ದೋಚಿಕೊಂಡು ಪರಾರಿಯಾಗಿದ್ದರು.

ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ನಡೆದ ಈ ಬರ್ಬರ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದರು. ನಿನ್ನೆ ರಾತ್ರಿ ಇಬ್ಬರು ಹಂತಕರು ಆನೇಕಲ್ ತಾಲ್ಲೂಕಿನ ಮುತ್ಯಾಲ ಮಡುವಿನ ಬಳಿ ಅಡಗಿದ್ದಾರೆ ಎಂಬ ಮಾಹಿತಿಯನ್ನಾಧರಿಸಿ ಹೆಬ್ಬಗೋಡಿ ಪೊಲೀಸರು ಅವರನ್ನು ಬಂಧಿಸಲು ಮಿಂಚಿನ ದಾಳಿ ನಡೆಸಿದರು. ಹೆಬ್ಬಗೋಡಿ ಇನ್ಸ್‍ಪೆಕ್ಟರ್ ಗೌತಮ್ ಮತ್ತು ಬನ್ನೇರುಘಟ್ಟ ಎಸ್‍ಐ ಗೋವಿಂದು ಮತ್ತವರ ತಂಡ ಆರೋಪಿಗಳ ಬಂಧನಕ್ಕೆ ಮುಂದಾದರು.

ಈ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಇನ್ಸ್‍ಪೆಕ್ಟರ್ ಗೌತಮ್ ಹಾಗೂ ಎಸ್‍ಐ ಗೋವಿಂದು ಅವರುಗಳು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದಿದ್ದಾರೆ.

ಆರೋಪಿಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಕಾನ್ಸ್‍ಟೆಬಲ್ ಶಿವಕುಮಾರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.  ಇಬ್ಬರು ಆರೋಪಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಹೆಬ್ಬಗೋಡಿ ಪೊಲೀಸರು ತಿಳಿಸಿದ್ದಾರೆ.

Facebook Comments