ಆಹಾರದ ಪದಾರ್ಥಗಳನ್ನು ಕದ್ದು ಮಾರುವಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಂಗನವಾಡಿ ಶಿಕ್ಷಕಿ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಮೇ 1- ಶಾಲಾ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ಪೋಷಕಾಂಶ ಆಹಾರದ ಪದಾರ್ಥಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಶಿಕ್ಷಕಿಯ ಅಸಲಿತನವನ್ನು ಬಯಲಿಗೆಳೆಯಲಾಗಿದೆ.

ಶಿರಾ ತಾಲ್ಲೂಕಿನ ಬುಕ್ಕಾ ಪಟ್ಟಣ, ಇಂದಿರಾ ಕಾಲೋನಿ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿ ತಿಮ್ಮರಾಜಮ್ಮ ಅವರನ್ನು ಪ್ರಸ್ತುತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಲವಾರು ಬಾರಿ ಆಹಾರ ಪದಾರ್ಥಗಳನ್ನು ಈಕೆ ಅಂಗನವಾಡಿಯಿಂದ ಪಟ್ಟಣದ ವಿವಿಧ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರೂ ಮಕ್ಕಳಿಗೆ ಬಿಸಿಯೂಟ ಸರಿಯಾಗಿ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ದೂರು ನೀಡುತ್ತಿದ್ದರು. ಆದರೂ ಆಹಾರ ಇಲಾಖೆಯಿಂದಲೇ ಪದಾರ್ಥಗಳು ಕಡಿಮೆ ಬರುತ್ತಿದೆ ಎಂದು ಸಬೂಬು ಹೇಳುತ್ತಿದ್ದರು.

ಆದರೆ ಇತ್ತೀಚೆಗೆ ಸಿಸಿ ಟಿವಿಯನ್ನು ಕೂಡ ಅಳವಡಿಸಲಾಗಿತ್ತು. ಇದರಿಂದಾಗಿ ಶಿಕ್ಷಕಿಯ ಚಾಲಾಕಿ ಕಳ್ಳತನ ಬಯಲಿಗೆ ಬಂದಿದೆ. ಗ್ರಾಮಸ್ಥರು ಒಟ್ಟುಗೂಡಿ ಈಕೆಯನ್ನು ರೆಡ್‍ಹ್ಯಾಂಡ್ ಆಗಿ ಹಿಡಿಯಲು ಕಾರ್ಯತಂತ್ರ ರೂಪಿಸಿದ್ದರು.

ಅದರಂತೆ ತಿಮ್ಮರಾಜಮ್ಮ ಗೋಣಿಚೀಲದಲ್ಲಿ ಎಣ್ಣೆ, ಬೆಲ್ಲ, ಬೇಳೆ ಮತ್ತಿತರ ವಸ್ತುಗಳನ್ನು ತುಂಬಿಕೊಂಡು ಜನರಲ್ ಸ್ಟೋರ್‍ವೊಂದಕ್ಕೆ ನೀಡುವಾಗ ಈಕೆ ಸಿಕ್ಕಿ ಬಿದ್ದಿದ್ದಾಳೆ. ತಕ್ಷಣ ಆಕೆ ಎಲ್ಲರ ಕಾಲಿಗೆ ಬಿದ್ದು ತಪ್ಪಾಯಿತು ಬಿಟ್ಟು ಬಿಡಿ ಎಂದು ಅಂಗಲಾಚಿದ್ದಾಳೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡ ಈ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin