ತುಮಕೂರಿನಲ್ಲೇ ಪ್ರತಿಭಟನೆ ಆರಂಭಿಸಿದ ಅಂಗನವಾಡಿ ಕಾರ್ಯಕರ್ತೆಯರು

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು ,ಡಿ.11- ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಗರದಲ್ಲೇ ಮುಷ್ಕರ ಪ್ರಾರಂಭಿಸಿದ್ದಾರೆ.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಂದ ಬೆಂಗಳೂರಿಗೆ ಆಗಮಿಸಿ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಸಿಐಟಿಯು ರಾಜ್ಯ ಘಟಕ ನಿರ್ಧರಿಸಿತ್ತು. ಆದರೆ, ನಿನ್ನೆ ತುಮಕೂರಿನಿಂದ ಬೆಂಗಳೂರಿಗೆ ಅಂಗನವಾಡಿ ಕಾರ್ಯಕರ್ತೆಯರು ಮೆರವಣಿಗೆ ಹೊರಟ ಕೂಡಲೇ ನಗರದಲ್ಲೇ ಪೊಲೀಸರು ತಡೆದರು. ಹಾಗಾಗಿ ಬೆಂಗಳೂರಿಗೆ ಹೋಗದೆ ನಗರದ ಗಾಜಿನ ಮನೆ ಆವರಣದಲ್ಲಿ ಕಾರ್ಯಕರ್ತೆಯರು ಧರಣಿ ಪ್ರಾರಂಭಿಸಿದ್ದಾರೆ.

ಎಲ್‍ಕೆಜಿ, ಯುಕೆಜಿ ತರಗತಿಗಳನ್ನು ಅಂಗನವಾಡಿ ಕೇಂದ್ರಗಳಲ್ಲೇ ನಡೆಸಲು ಆದೇಶ ಹೊರಡಿಸಬೇಕು. ಯಾವುದೇ ಕಾರಣಕ್ಕೂ ಅಂಗನವಾಡಿಗಳನ್ನು ಖಾಸಗೀಕರಣಗೊಳಿಸಬಾರದು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿರುವುದಾಗಿ ರಾಜ್ಯ ಘಟಕದ ಅಧ್ಯಕ್ಷೆ ಎಸ್.ವರಲಕ್ಷ್ಮಿ ತಿಳಿಸಿದ್ದಾರೆ.

ಸುಮಾರು ಎಂಟರಿಂದ ಹತ್ತು ಸಾವಿರ ಸಂಖ್ಯೆಯಲ್ಲಿ ಇರುವ ಮಹಿಳೆಯರು ರಾತ್ರಿಯಿಡೀ ಕೊರೆಯುವ ಚಳಿಯಲ್ಲಿಯೇ ಕಾಲ ಕಳೆದರು. ಇಂದು ಬೆಳಿಗ್ಗೆ ಶೌಚಾಲಯಗಳಿಲ್ಲದೆ ಅವರ ಸ್ಥಿತಿ ಮತ್ತೆ ಯಾರಿಗೂ ಬರಬಾರದು ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಮಹಿಳೆಯರು ತುಮಕೂರಿನ ಅಮಾನಿಕೆರೆಯ ಗಾಜಿನ ಮನೆಯ ಆಶ್ರಯ ಪಡೆದುಕೊಂಡಿದ್ದಾರೆ.  ಆದರೆ, ಗಾಜಿನಮನೆ ಯಾವುದಕ್ಕೂ ಸಾಕಾಗದೇ ಇರುವ ಪರಿಣಾಮ ಬಹುತೇಕ ಮಂದಿ ಸಿದ್ದಗಂಗಾಮಠ ಸೇರಿದಂತೆ ಹಲವು ರಸ್ತೆಗಳ ಆಶ್ರಯ ಪಡೆದು ಸ್ಥಳದಲ್ಲೇ ಅಡುಗೆ ಮಾಡಿಕೊಳ್ಳುತ್ತಿದ್ದಾರೆ.

ಈ ಸಂದರ್ಭದಲ್ಲಿ ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿದ ಗಾಂಧಿವಾದಿ ಪ್ರಸನ್ನ, ಕಳೆದ 40 ವರ್ಷಗಳಿಂದ ಮಕ್ಕಳ ಲಾಲನೆ ಪಾಲನೆ ಮತ್ತು ಕಲಿಕೆ ಎರಡನ್ನೂ ಮಾಡಿಕೊಂಡು ಬಂದಿರುವ ಅಂಗನವಾಡಿ ನೌಕರರು ಮತ್ತು ಕಾರ್ಯಕರ್ತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅಂಗನವಾಡಿ ನೌಕರರ ಬೇಡಿಕೆಗಳು ವೈಜ್ಞಾನಿಕವಾಗಿವೆ. ಅವುಗಳನ್ನು ಈಡೇರಿಸುವ ಕೆಲಸವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಡಬೇಕು. ಅವರ ಬೇಡಿಕೆಗಳನ್ನು ಈಡೇರಿಸದಿದ್ದರೆ ಬೃಹತ್ ಹೋರಾಟ ಮಾಡಲಾಗುವುದು ಎಂದರು.

Facebook Comments