ಅಂಗನವಾಡಿ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ ತಾತ್ಕಾಲಿಕ ಅಂತ್ಯ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಡಿ.12- ಕಳೆದ ಎರಡು ದಿನಗಳಿಂದ ನಗರದಲ್ಲಿ ಅಹೋರಾತ್ರಿ ಧರಣಿ ಕೈಗೊಂಡಿದ್ದ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಲಿಖಿತ ರೂಪದ ಭರವಸೆಯ ಮೇರೆಗೆ ತಾತ್ಕಾಲಿಕವಾಗಿ ತಮ್ಮ ಹೋರಾಟವನ್ನು ವಾಪಸ್ ಪಡೆದಿದ್ದಾರೆ.  ಡಿ.16ರ ಬೆಳಗ್ಗೆ 11 ಗಂಟೆಗೆ ವಿಧಾನ ಸೌಧದ ಕೊಠಡಿ ಸಂಖ್ಯೆ 320 ರಲ್ಲಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.

ಈ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸಹ ಭಾಗವಹಿಸಲಿದ್ದಾರೆ. ಈ ಸಂಬಂಧ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರವನ್ನು ಅಂತ್ಯಗೊಳಿಸಲಾಯಿತು. ರಾಜ್ಯದ ವಿವಿಧೆಡೆಗಳಿಂದ ಅಂಗನವಾಡಿ ಕಾರ್ಯಕರ್ತೆಯರು ತುಮಕೂರಿನಲ್ಲಿ ಜಮಾಯಿಸಿದ್ದರು. ಇಲ್ಲಿನ ಗಾಜಿನ ಮನೆ ಆವರಣದಿಂದ ಜಾಥಾ ಆರಂಭವಾಗಬೇಕಿತ್ತು.

ಜಾಥಾ ಆರಂಭವಾಗುವುದಕ್ಕೂ ಮುನ್ನವೆ ತುಮಕೂರಿನಲ್ಲಿ ತಡೆಯೊಡ್ಡಲಾಯಿತು. ಹೀಗಾಗಿ ರಾತ್ರಿಯಿಡಿ ಚಳಿಯನ್ನು ಲೆಕ್ಕಿಸದೆ ಕಾರ್ಯಕರ್ತೆಯರು ಅಮಾನಿಕೆರೆ ಪ್ರದೇಶ ಸುತ್ತಮುತ್ತ ತಂಗಿದ್ದರು. ಹೋರಾಟ ತೀವ್ರಗೊಳ್ಳುವ ಲಕ್ಷಣಗಳ ಹಿನ್ನೆಲೆಯಲ್ಲಿ ಸರ್ಕಾರದಿಂದ ಒಂದು ಲಿಖಿತ ಪತ್ರ ರವಾನೆಯಾಗಿ ಸದರಿ ಪತ್ರವನ್ನು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್, ಎಸ್ಪಿ ಡಾ.ಕೆ.ವಂಶಿಕೃಷ್ಣ, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಧರಣಿ ನಿರತರ ಸ್ಥಳಕ್ಕೆ ತೆರಳಿ ಸರ್ಕಾರದ ಪತ್ರವನ್ನು ಓದಿ ಹೇಳಿದರು.

ಡಿ.16 ರಂದು ಮುಖ್ಯ ಕಾರ್ಯದರ್ಶಿಗಳ ಜೊತೆ ಸಭೆ ನಿಗದಿಪಡಿಸಿರುವುದಾಗಿ, ಅಲ್ಲಿಯವರೆಗೆ ಹೋರಾಟವನ್ನು ಕೈಬಿಡುವಂತೆ ಮನವಿ ಮಾಡಲಾಗಿರುವ ವಿಷಯವನ್ನು ತಿಳಿಸಿದರು. ಈ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ತಮ್ಮ ತಮ್ಮ ಊರುಗಳಿಗೆ ವಾಪಸ್ ಆಗುವ ನಿರ್ಧಾರ ಕೈಗೊಂಡರು.
ಇದಕ್ಕೂ ಮುನ್ನ ಬೆಳಗ್ಗೆ ಮುಷ್ಕರನಿರತರನ್ನು ಉದ್ದೇಶಿಸಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎಸ್.ಉಮೇಶ್ ಮಾತನಾಡಿ, ತುಮಕೂರಿನ ಸ್ವಾತಂತ್ರ್ಯ ಚೌಕದಿಂದ ಪಾದಯಾತ್ರೆ ಆರಂಭಿಸಬೇಕಿತ್ತು.

ಈ ಚೌಕ ಬ್ರಿಟೀಷರ ವಿರುದ್ಧ ಹೋರಾಡಿ ಪ್ರಾಣ ತೆತ್ತ ಹುತಾತ್ಮಕ ಸ್ಥಳವಾಗಿದೆ. ಆದ, ಅಂಗನವಾಡಿ ನೌಕರರ ಹೋರಾಟವನ್ನು ರಾಜ್ಯ ಸರ್ಕಾರ ಹತ್ತಿಕ್ಕಿದೆ. ಇದನ್ನು ಪ್ರತಿಯೊಬ್ಬರೂ ಖಂಡಿಸುತ್ತೇವೆ ಎಂದರು. ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ನವೀನ್ ಕುಮಾರ್, ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಪಳ್ಳ. ಮುಖಂಡರಾದ ಬಸವರಾಜï ಪೂಜಾರ್, ಗಾಂವಕರ್, ಎಚ್.ಎಸ್. ಸುನಂದ ಶಾಂತ ಘಂಟಿ, ನಾಗರತ್ನ, ಜಿ.ಕಮಲ, ಗುಲ್ಜಾರ್ ಬಾನು, ಸೈಯದ್ ಮುಜೀಬ್, ಎನ್.ಕೆ.ಸುಬ್ರಮಣ್ಯ, ಅನಸೂಯ, ಪಾರ್ವತಮ್ಮ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Facebook Comments