ಅಂಗನವಾಡಿಗಳಲ್ಲಿ ಗೋಲ್‍ಮಾಲ್, ರಾಜ್ಯಗಳಿಗೆ ಕೇಂದ್ರ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.22- ಅಂಗನವಾಡಿ ಕೇಂದ್ರಗಳಲ್ಲಿ ಲಕ್ಷಾಂತರ ನಕಲಿ ಫಲಾನುಭ ವಿಗಳ ಪ್ರಕರಣ ಬೆಳಕಿಗೆ ಬರುತ್ತಿದ್ದು, ಭಾರೀ ಅಕ್ರಮ-ಅವ್ಯವಹಾರಗಳು ನಡೆದಿರುವುದು ವರದಿಯಾಗಿದೆ.  ಇದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಎಲ್ಲ ರಾಜ್ಯ ಸರ್ಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ಫಲಾನುಭವಿಗಳ ಸಂಪೂರ್ಣ ವಿವರಗಳ ಅಂಕಿ-ಅಂಶಗಳನ್ನು ಒದಗಿಸುವಂತೆ ಸೂಚನೆ ನೀಡಿದೆ.

ಈಶಾನ್ಯ ರಾಜ್ಯ ಆಸ್ಸಾಂವೊಂದರಲ್ಲೆ 19.96 ಲಕ್ಷ ನಕಲಿ ಫಲಾನುಭವಿಗಳಿರುವುದು ಪತ್ತೆಯಾಗಿದೆ. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ನಕಲಿ ಹೆಸರುಗಳನ್ನು ಸೇರಿಸಿ ಭಾರೀ ಅಕ್ರಮಗಳನ್ನು ಎಸಗಿರುವ ಬಗ್ಗೆ ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ವರದಿಯೊಂದು ಲಭಿಸಿದೆ.

ಇದರಿಂದ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದ್ದು, ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳ ಅಂಗನವಾಡಿ ಕೇಂದ್ರಗಳಲ್ಲಿ ಈವರೆಗೆ ಸೌಲಭ್ಯ ಪಡೆದಿರುವವರು ಮತ್ತು ಈ ಸೌಲಭ್ಯವನ್ನು ದುರುಪಯೋಗ ಮಾಡಿಕೊಂಡಿರವವರ ಅಂಕಿ-ಅಂಶಗಳ ವಿವರವನ್ನು ನೀಡುವಂತೆ ಎಲ್ಲ ರಾಜ್ಯಗಳ ಮುಖ್ಯಕಾರ್ಯದರ್ಶಿಗಳಿಗೆ ತಿಳಿಸಲಾಗಿದೆ.

ಗರ್ಭಿಣಿಯರು ಆರೋಗ್ಯ ವರ್ಧನೆ ಮತ್ತು ಮಕ್ಕಳ ಅಪೌಷ್ಟಿಕತೆ ನಿರ್ಮೂಲನೆಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿರುವ ಅಂಗನವಾಡಿ ಕೇಂದ್ರಗಳಲ್ಲಿ ಭಾರೀ ಅಕ್ರಮ-ಅವ್ಯವಹಾರಗಳ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಈ ನೋಟಿಸ್ ಜಾರಿ ಮಾಡಿದೆ.

Facebook Comments