ಬೆಳಗಾವಿಯಲ್ಲಿ ಅಂಬ್ಯುಲೆನ್ಸ್ ಗೆ ಬೆಂಕಿಯಿಟ್ಟ ಪ್ರಕರಣದಲ್ಲಿ ಮೂವರು ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಜು.23- ಬೆಳಗಾವಿ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್‍ನಲ್ಲಿ ಕಿಡಿಗೇಡಿಗಳು ನಡೆಸಿದ ಹಲ್ಲೆ ಮತ್ತು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಇತ್ತ ಭೀಮ್ಸ್ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆಗಿಳಿದಿದ್ದಾರೆ.

ನಿನ್ನೆ ರಾತ್ರಿ ನಡೆದ ಕಿಡಿಗೇಡಿಗಳ ಪುಂಡಾಟಿಕೆಗೆ ಐವರು ಜನ ಗಾಯಗೊಂಡಿದ್ದು, ಒಂದು ಆ್ಯಂಬ್ಯುಲೆನ್ಸ್ ಸಂಪೂರ್ಣ ಭಸ್ಮವಾಗಿ ಪೊಲೀಸ್ ವಾಹನ ಸೇರಿದಂತೆ ಒಟ್ಟು ಐದು ವಾಹನಗಳು ಜಖಂಗೊಂಡಿವೆ.

ಆಸ್ಪತ್ರೆ ಸಿಬ್ಬಂದಿಯನ್ನು ಗುರಿಯಾಗಿರಿಸಿಕೊಂಡು ಆ್ಯಂಬುಲೆನ್ಸ್‍ಗೆ ಬೆಂಕಿ ಇಟ್ಟ ಘಟನೆಯಿಂದ ಸಿಬ್ಬಂದಿ ಆತಂಕಕ್ಕೊಳಗಾಗಿದ್ದು, ಮುಕ್ತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಇಂದು ಭೀಮ್ಸ್ ಎದುರು ಪ್ರತಿಭಟನೆ ನಡೆಸಿದ್ದಾರೆ.

ನಿನ್ನೆ ನಡೆದ ಘಟನೆ ಪೂರ್ವ ನಿಯೋಜಿತ ಕೃತ್ಯವಾಗಿದೆ ಎಂದು ಶಂಕಿಸಿದ್ದು, ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲಾಸ್ಪತ್ರೆ ಭೀಮ್ಸ್ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿದೆ.

ಬೆಳಗಾವಿಯ ಎಪಿಎಂಸಿ ಪೊಲೀಸರು ಇಡೀ ರಾತ್ರಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದು, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇನ್ನೂ ಹಲವಾರು ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ.

ನಿನ್ನೆ ರಾತ್ರಿ ಘಟನೆ ಬಳಿಕ ಮುಖ್ಯಮಂತ್ರಿಗಳು ಘಟನೆಯ ಕುರಿತು ವರದಿ ನೀಡಲು ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಅಮಲನ್ ಬಿಸ್ವಾಸ್ ಅವರು ನಿನ್ನೆ ಮಧ್ಯರಾತ್ರಿಯೇ ಸಭೆ ನಡೆಸಿ ಭೀಮ್ಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಬೆಳಗಾವಿ ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು ಮತ್ತು ಪ್ರಾದೇಶಿಕ ಆಯುಕ್ತರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಭೀಮ್ಸ್ ವೈದ್ಯರನ್ನು ಭೇಟಿಯಾಗಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

Facebook Comments

Sri Raghav

Admin