ಮಾಜಿ ಸಚಿವ ದೇಶ್‍ಮುಖ್ ನಿವಾಸಗಳ ಮೇಲೆ ಇಡಿ ರೈಡ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.25-ಲಂಚ ಆರೋಪಕ್ಕೆ ಗುರಿಯಾಗಿ ಸಚಿವ ಸ್ಥಾನ ಕಳೆದುಕೊಂಡಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‍ಮುಖ್ ಅವರ ನಾಗ್ಪುರ ಮತ್ತು ಮುಂಬೈನಲ್ಲಿರುವ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ದೇಶ್‍ಮುಖ್ ಅವರ ನಾಗ್ಪುರ ನಿವಾಸ ಮತ್ತು ಇತರ ಕೆಲವು ಕಡೆ ದಾಳಿ ನಡೆಸಿ ಹಲವಾರು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್‍ಭೀರ್ ಸಿಂಗ್ ಅವರು ದೇಶ್‍ಮುಖ್ ವಿರುದ್ಧ ಲಂಚ ಕೇಳಿದ ಆರೋಪ ಮಾಡಿದ ನಂತರ ಮುಂಬೈ ಹೈಕೋರ್ಟ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿತ್ತು.

ನ್ಯಾಯಾಲಯದ ಸೂಚನೆ ಮೇರೆಗೆ ಸಿಬಿಐ ದೇಶ್‍ಮುಖ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ದೇಶ್‍ಮುಖ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿತ್ತು.

Facebook Comments