‘ಪೌರತ್ವ ಕಾಯ್ದೆ, ಎನ್‌ಆರ್‌ಸಿ ತಿರಸ್ಕರಿಸಲು ಸಾಧ್ಯವೇ ಇಲ್ಲ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.27- ಸಂಸತ್ತಿನ ಉಭಯ ಸನದಗಳಲ್ಲಿ ಬಹುಮತದಿಂದ ಅಂಗೀಕಾರವಾಗಿ ರಾಷ್ಟ್ರಪತಿಗಳಿಂದ ಸಹಿಯಾದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಪೌರತ್ವ ತಿದ್ದುಪಡಿ ನೋಂದಣಿ ಕಾಯ್ದೆ (ಎನ್‍ಸಿಆರ್)ಯನ್ನು ಯಾವುದೇ ರಾಜ್ಯ ಸರ್ಕಾರಗಳು ತಿರಸ್ಕರಿಸಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಅನಿಲ್ ಜೈನ್ ಹೇಳಿದ್ದಾರೆ.

ಒಕ್ಕೂಟ ವ್ಯವಸ್ಥೆಯನ್ನು ನಾವೆಲ್ಲರೂ ಒಪ್ಪಿಕೊಂಡಿರುವ ಕಾರಣ ಪ್ರಜಾಪ್ರಭುತ್ವದ ಆಶಯವನ್ನು ಎತ್ತಿ ಹಿಡಿಯುತ್ತೇನೆಂದು ಶಪಥ ಮಾಡಿರುವುದರಿಂದ ಕೇಂದ್ರದ ಅವಳಿ ಮಸೂದೆಗಳನ್ನು ತಿರಸ್ಕರಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಹೆಚ್ಚೆಂದರೆ ಪ್ರತಿಭಟನೆ ನಡೆಸಬಹುದೇ ಹೊರತು ಅನುಷ್ಠಾನ ಮಾಡದೆ ಬೇರೆ ದಾರಿಯಿಲ್ಲ ಎಂದು ಸ್ಪಷ್ಟಪಡಿಸಿದರು.

ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ಆಡಳಿತವಿರುವ ರಾಜ್ಯಗಳು ಮಸೂದೆಯನ್ನು ಬೇರೆ ಬೇರೆ ಕಾರಣಗಳಿಗಾಗಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿವೆ. ವಾಸ್ತವವಾಗಿ ಸಿಎಎ, ಎನ್‍ಸಿಆರ್ ನಡುವೆ ಒಂದಕ್ಕೊಂದು ಸಂಬಂಧವೇ ಇಲ್ಲ. ದೇಶದಲ್ಲಿ ಉಂಟಾಗಿರುವ ಗೊಂದಲಗಳಿಗೆ ಕಾಂಗ್ರೆಸ್ ಷಡ್ಯಂತ್ರವೇ ಕಾರಣ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರು ಸಿಎಎ, ಎನ್‍ಸಿಆರ್, ಎನ್‍ಟಿಆರ್ ನಡುವೆ ಸಂಬಂಧವಿಲ್ಲವೆಂದು ಪುನರುಚ್ಚರಿಸಿದ್ದಾರೆ. ಜನತೆಯಲ್ಲಿ ಗೊಂದಲ ಸೃಷ್ಟಿಸುವ ಕಾರಣಕ್ಕಾಗಿ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ರಾಜಕೀಯ ಅರಾಜಕತೆ ಸೃಷ್ಟಿಸಲು ಹೊರಟಿವೆ ಎಂದು ದೂರಿದರು. ಸುಪ್ರೀಂಕೋರ್ಟ್ ನಿರ್ದೇಶನ ದಂತೆ ಅಸ್ಸೋಂ ರಾಜ್ಯದಲ್ಲಿ ಮಾತ್ರ ಎನ್‍ಸಿಆರ್ ಜಾರಿಗೆ ಬರಲಿದೆ. ಸದ್ಯಕ್ಕೆ ಈ ಕಾಯ್ದೆಯನ್ನು ದೇಶದ ಯಾವುದೇ ರಾಜ್ಯಗಳಲ್ಲೂ ಅನುಷ್ಠಾನಗೊಳಿಸುವುದಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ವೋಟ್‍ಬ್ಯಾಂಕ್ ರಾಜಕಾರಣ ಹಾಗೂ ಅಲ್ಪಸಂಖ್ಯಾತರ ಓಲೈಕೆಯೇ ಈ ಪ್ರತಿಭಟನೆ ಹಿಂದಿರುವ ಹುನ್ನಾರ ಎಂದು ಟೀಕಿಸಿದರು.

ದೇಶದ ಯಾವುದೇ ಒಬ್ಬ ನಾಗರಿಕರಿಗೆ ಮಸೂದೆ ಜಾರಿಯಿಂದ ತೊಂದರೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರವೇ ಸ್ಪಷ್ಟನೆ ಕೊಟ್ಟಿದೆಯಾದರೂ ಪ್ರತಿಪಕ್ಷಗಳು ನಿರಂತರವಾಗಿ ಗೊಂದಲ ಸೃಷ್ಟಿಸುವ ತಂತ್ರ ನಡೆಸುತ್ತಿವೆ.  ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದು ತಿರುಗೇಟು ನೀಡಿದರು. 2003ರಲ್ಲಿ ಅಂದಿನ ರಾಜ್ಯಸಭಾ ಸದಸ್ಯರಾಗಿದ್ದ ಮಾಜಿ ಪ್ರಧಾನಿ ಡಾ.ಮನಮೋಹನ್‍ಸಿಂಗ್ ಅವರೇ ಕಾಯ್ದೆ ಜಾರಿ ಮಾಡುವಂತೆ ಸಲಹೆ ಮಾಡಿದ್ದರು.

ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದಿಂದ ವಲಸೆ ಬಂದಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಈ ಕಾಯ್ದೆ ಅನ್ವಯವಾಗಲಿದೆ. ಉಳಿದಂತೆ ಯಾರೊಬ್ಬರೂ ಭಯ ಪಡಬೇಕಿಲ್ಲ ಎಂದು ಹೇಳಿದರು.

ಈ ಮೂರು ಮುಸ್ಲಿಂ ರಾಷ್ಟ್ರಗಳು. ಇಲ್ಲಿ ಮುಸ್ಲಿಂ ಹೊರತುಪಡಿಸಿದರೆ ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು, ಪಾರ್ಸಿ ಸೇರಿದಂತೆ ಆರು ಸಮುದಾಯದವರವನ್ನು ಧಾರ್ಮಿಕ ಅಲ್ಪಸಂಖ್ಯಾತರೆಂದು ಪರಿಗಣಿಸಲಾಗುತ್ತದೆ. ದೇಶದಲ್ಲಿರುವ 130 ಕೋಟಿ ಭಾರತೀಯರು ಆತಂಕಪಡುವ ಅಗತ್ಯವಿಲ್ಲ. ಪ್ರತಿಪಕ್ಷಗಳ ಷಡ್ಯಂತ್ರಕ್ಕೆ ಬಲಿಯಾಗಬಾರದು ಎಂದು ಮನವಿ ಮಾಡಿದರು.

2014ರ ಡಿ.31 ರಿಂದ ದೇಶದಲ್ಲಿ ನೆಲೆಸಿರುವ ಆರು ಸಮುದಾಯದವರಿಗೆ ಮಾತ್ರ ಇದು ಅನ್ವಯವಾಗಲಿದೆ. ಕೂಡಲೇ ಪ್ರತಿಪಕ್ಷದವರು ಸುಳ್ಳು ಆಪಾದನೆ ಮಾಡುವುದನ್ನು ನಿಲ್ಲಿಸಬೇಕು. ಮೋದಿ ಸರ್ಕಾರದ ಜನಪ್ರಿಯತೆ ಸಹಿಸದೆ ಈ ಕುತಂತ್ರ ನಡೆಸುತ್ತಿದೆ ಎಂದು ಕಿಡಿಕಾರಿದರು. ಸುದ್ದಿಗೋಷ್ಠಿಯಲ್ಲಿ ಸಂಸದ ಪಿ.ಸಿ.ಮೋಹನ್, ಮುನಿಸ್ವಾಮಿ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ, ತಮ್ಮೇಶ್‍ಗೌಡ ಮತ್ತಿತರರಿದ್ದರು.

Facebook Comments