ಕೊರೊನಾ ಭೀತಿ : ಮೊದಲೇ ನಿಶ್ಚಯಿಸಿದ್ದ ಮದುವೆಗೆ ಅವಕಾಶ ನೀಡಿದ ಬಿಬಿಎಂಪಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು , ಮಾ.16- ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಮದುವೆಗಳ ಮೇಲೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಿರುವ ಬಿಬಿಎಂಪಿ ಸಾಧಾರಣ ಮದುವೆಗೆ ಅವಕಾಶ ಕಲ್ಪಿಸಿಕೊಟ್ಟಿದೆ.  ಮೂರು ದಿನಗಳ ಹಿಂದೆ ನಗರದಲ್ಲಿ ಯಾವುದೇ ರೀತಿಯ ವಿವಾಹ ವಾರ್ಷಿಕೋತ್ಸವಗಳು, ಸಭೆ-ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್ ಆದೇಶ ಹೊರಡಿಸಿದ್ದರು.

ಆದರೆ, ಈ ಹಿಂದೆಯೇ ಮದುವೆ ನಿಶ್ಚಯ ಮಾಡಿರುವುದರಿಂದ ವಿವಾಹ ಸಮಾರಂಭಗಳನ್ನು ಮುಂದೂಡಲು ಸಾಧ್ಯವಿಲ್ಲ ಎಂಬ ಸಾರ್ವಜನಿಕ ಬೇಡಿಕೆ ಹಿನ್ನೆಲೆಯಲ್ಲಿ ಈ ಮೊದಲೇ ನಿಗದಿಯಾಗಿದ್ದ ವಿವಾಹಗಳನ್ನು ಸಾಧಾರಣವಾಗಿ ನಡೆಸಲು ಅನುವು ಮಾಡಿಕೊಡಲಾಗಿದೆ.  ಈ ಮೊದಲೇ ನಿಗದಿಯಾಗಿದ್ದ ವಿವಾಹ ಸಮಾರಂಭದಲ್ಲಿ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ವಿವಾಹ ನಡೆಯುವ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಸಮಾರಂಭದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಸ್ಯಾನಿಟೈಸೇಷನ್ ನೀಡಬೇಕು ಎಂದು ಸೂಚನೆ ನೀಡಲಾಗಿದೆ. ಒಂದು ವೇಳೆ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ವ್ಯಕ್ತಿಗೆ ಕಫ, ಶೀತ, ಜ್ವರದಂತಹ ರೋಗ ಲಕ್ಷಣಗಳು ಕಂಡುಬಂದರೆ ಕೂಡಲೇ ಅವರನ್ನು ಸ್ಥಳದಿಂದ ಹೊರಕಳುಹಿಸುವಂತೆಯೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಈ ಆದೇಶ ಈ ಮೊದಲೇ ನಿಶ್ಚಯವಾಗಿದ್ದ ವಿವಾಹ ಸಮಾರಂಭಗಳಿಗೆ ಮಾತ್ರ ಅನ್ವಯವಾಗಲಿದೆ. ಯಾವುದೇ ಕಾರಣಕ್ಕೂ ಕಲ್ಯಾಣ ಮಂಟಪದ ಮಾಲೀಕರು ಹೊಸದಾಗಿ ತಮ್ಮ ಮಂಟಪಗಳನ್ನು ಬುಕ್ಕಿಂಗ್ ಮಾಡಿಕೊಳ್ಳುವಂತಿಲ್ಲ.  ಒಂದು ವೇಳೆ ಹೊಸದಾಗಿ ಕಲ್ಯಾಣ ಮಂಟಪಗಳನ್ನು ಬುಕ್ಕಿಂಗ್ ಮಾಡಿಕೊಂಡಿರುವುದು ಕಂಡುಬಂದರೆ ಅಂತಹ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರನ್ನು ಕೊರೊನಾ ವೈರಸ್ ಹಾವಳಿಯಿಂದ ಕಾಪಾಡಲು ಪಾಲಿಕೆ ವತಿಯಿಂದ ಕೆಲವು ಕಟ್ಟುನಿಟ್ಟಿನ ನಿರ್ಣಯಗಳನ್ನು ಕೈಗೊಂಡಿದ್ದು, ಸ್ವಾಸ್ಥ್ಯ ಸಮಾಜ ನಿರ್ಮಾಣದ ಉದ್ದೇಶದಿಂದ ಕೈಗೊಂಡಿರುವ ನಮ್ಮ ಈ ಕಾರ್ಯದಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಬಿಬಿಎಂಪಿ ಮನವಿ ಮಾಡಿಕೊಂಡಿದೆ.

Facebook Comments