ಜಂಬೂಗೆ 49ರ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ. 17- ಭಾರತ ಕಂಡ ಖ್ಯಾತ ಸ್ಪಿನ್ನರ್, ಮಾಜಿ ತರಬೇತುದಾರ ಅನಿಲ್‍ಕುಂಬ್ಳೆ ಇಂದು ತಮ್ಮ 49 ನೆ ಜನ್ಮದಿನವನ್ನು ಆಚರಿಸಿಕೊಂಡರು. ಖ್ಯಾತ ಕ್ರಿಕೆಟಿಗರು, ಅಭಿಮಾನಿಗಳು ಟ್ವಿಟ್ಟರ್ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ನಿಮ್ಮ ಕ್ರಿಕೆಟ್ ಜೀವನದಲ್ಲಿ ಎರಡನೇ ಸೆಂಚುರಿ ಗಳಿಸುವಲ್ಲಿ ವಿಫಲರಾಗಲು ನಾನೇ ಕಾರಣ ಆದರೆ ನೀವು ಇನ್ನು 51 ವರ್ಷ ಬಾಳುವ ಮೂಲಕ ನಿಜ ಜೀವನದಲ್ಲಿ ಶತಕವನ್ನು ಬಾರಿಸಿರಿ ಎಂದು ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹಾರೈಸಿದ್ದಾರೆ.

ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್‍ಗಂಭೀರ್, ಯುವ ಆಟಗಾರರಲ್ಲಿ ಸ್ಫೂರ್ತಿ ತುಂಬಿ ಅವರ ಜೀವನಕ್ಕೆ ಸಹಕಾರಿಯಾಗಿದ್ದ ಅನಿಲ್‍ಕುಂಬ್ಳೆ ಅವರೊಂದಿಗೆ ಮೈದಾನದ ಹಂಚಿಕೊಂಡಿದ್ದೇ ಅತ್ಯಂತ ಸಂತಸದ ಕ್ಷಣ. ದೇಶಕ್ಕೆ ಅವರು ಸಾಕಷ್ಟು ಗೆಲುವನ್ನು ತಂದುಕೊಟ್ಟಿದ್ದಾರೆ ಎನ್ನುವ ಮೂಲಕ ಜನ್ಮದಿನ ಶುಭಾಶಯ ಕೋರಿದ್ದಾರೆ.

ಕ್ರಿಕೆಟಿಗರಾದ ವಿವಿಎಸ್ ಲಕ್ಷ್ಮಣ್, ಮೊಹಮ್ಮದ್ ಕೈಫ್, ಹರ್ಭಜನ್‍ಸಿಂಗ್, ಮೊಹಮ್ಮದ್‍ಶಮಿ, ಪ್ರಜ್ಞಾನ್ ಓಝಾ, ರವಿಚಂದ್ರನ್ ಅಶ್ವಿನ್, ಬಿಸಿಸಿಐ ಮಾಜಿ ಅಧ್ಯಕ್ಷ ರಾಜೀವ್‍ಶುಕ್ಲಾ ಸೇರಿದಂತೆ ಮತ್ತಿತರರು ಜಂಬೂಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ.

ಕುಂಬ್ಳೆ ಸಂತಸ: ಮೂರು ವರ್ಷಗಳ ನಂತರ ಮತ್ತೆ ತರಬೇತುದಾರನ ಜವಾಬ್ದಾರಿ ಹೊತ್ತುಕೊಂಡಿರುವುದು ಸಂತಸ ತಂದಿದೆ, ಮುಂದಿನ ಐಪಿಎಲ್‍ನಲ್ಲಿ ನನ್ನ ತಂಡದಿಂದ ಉತ್ತಮ ಪ್ರದರ್ಶನ ಹೊಮ್ಮಿಬರುವಂತೆ ನೋಡಿಕೊಳ್ಳುತ್ತೇನೆ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್‍ನ ತರಬೇತುದಾರರೂ ಆಗಿರುವ ಅನಿಲ್‍ಕುಂಬ್ಳೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆರಂಭದಿಂದ ಉತ್ತಮ ಪ್ರದರ್ಶನ ತೋರಿದರೇ ಮಾತ್ರ ಚಾಂಪಿಯನ್ಸ್ ಆಗಲು ಸಾಧ್ಯ. ಒಂದೆರಡು ಪಂದ್ಯಗಳಲ್ಲಿ ಸೋತರೆ 3ನೆ ಸ್ಥಾನಕ್ಕೆ ಕುಸಿದು ನಂತರದ ಕೆಲವು ಪಂದ್ಯಗಳಲ್ಲಿ ಎಡವಿದರೆ ಏಳನೇ ಸ್ಥಾನಕ್ಕೆ ಕುಸಿಯುವ ಮೂಲಕ ಚಾಂಪಿಯನ್ಸ್ ಆಗುವ ಅವಕಾಶವನ್ನು ಕೈಚೆಲ್ಲಬೇಕಾಗಿರುವುದರಿಂದ ಪಾಯಿಂಟ್ಸ್ ಪಟ್ಟಿಯಲ್ಲಿ ಟಾಪ್ ತಂಡವಾಗಿಯೇ ಮುಂದುವರೆಯುವಂತೆ ನೋಡಿಕೊಳ್ಳುವಂತೆ ಎಂದು ಹೇಳಿದರು.

Facebook Comments