ಮೈಸೂರಿನಲ್ಲಿ ಶೀಘ್ರದಲ್ಲೇ ವಿಷ್ಣು ಸ್ಮಾರಕ : ಅನಿರುದ್ಧ

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ, ಡಿ.22- ವಿಷ್ಣು ಸ್ಮಾರಕಕ್ಕೆ ಮೈಸೂರಿನಲ್ಲಿ ಸ್ಥಳ ನಿಗದಿಯಾಗಿದ್ದು, ಶೀಘ್ರದಲ್ಲೇ ಸ್ಮಾರಕದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಜೊತೆ ಜೊತೆಯಲ್ಲಿ ಧಾರಾವಾಹಿ ಖ್ಯಾತಿಯ ಅನಿರುದ್ಧ (ಆರ್ಯವರ್ಧನ್) ತಿಳಿಸಿದರು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಸ್ಮಾರಕ ನಿರ್ಮಾಣಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ.


ಈಗಾಗಲೇ ಕೆಲವು ಶಿಲ್ಪಿಗಾರರನ್ನು ಕರೆಸಿ ಯಾವ ರೀತಿಯಲ್ಲಿ ಸ್ಮಾರಕ ನಿರ್ಮಿಸಬೇಕೆಂದು ಚರ್ಚಿಸಲಾಗಿದೆ ಎಂದರು. ವಿಷ್ಣು ಅಪ್ಪಾಜಿ ಅವರು ಮೈಸೂರನ್ನು ತುಂಬಾ ಪ್ರೀತಿಸುತ್ತಿದ್ದರು. ಹಾಗಾಗಿ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಬೇಕೆಂಬ ಆಸೆ ಇದೆ ಎಂದರು.

ವಿಷ್ಣು ಅಪ್ಪಾಜಿಯವರು ಹುಟ್ಟಿದ್ದೇ ಈ ಚಿತ್ರದುರ್ಗದಲ್ಲಿ. ನಾಗರಹಾವು ಸಿನಿಮಾ ಮೂಲಕ, ಸಂಪತ್ ಕುಮಾರ್ ವಿಷ್ಣುವರ್ಧನ್ ಆದರು. ಅವರಿಗೆ ನೀಡಿದ ಪ್ರೀತಿ-ವಿಶ್ವಾಸ, ಅಭಿಮಾನ ನಮ್ಮ ಕುಟುಂಬದ ಮೇಲೆ ಸದಾ ಹೀಗೇ ಇರಲಿ. ಧಾರಾವಾಹಿ ಇತಿಹಾಸದಲ್ಲೇ ಜೊತೆ ಜೊತೆಯಲ್ಲಿ ಧಾರಾವಾಹಿ ಅತ್ಯಂತ ಯಶಸ್ವಿಯಾಗಿ ನಿಮ್ಮೆಲ್ಲರ ಮನಸ್ಸು ಗೆದ್ದಿದೆ ಎಂದರು.

ಇಂದು ಜೊತೆ ಜೊತೆಯಲಿ ತಂಡ ಚಿತ್ರದುರ್ಗಕ್ಕೆ ಆಗಮಿಸಿದ್ದು, ಕನ್ನಡ ಕಿರುತೆರೆಯಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿರುವ ಜೊತೆ ಜೊತೆಯಲ್ಲಿ ಜಾತ್ರೆ ಇಂದು ಸಂಜೆ 5.30 ನಡೆಯಲಿದ್ದು, ತಾವೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಇದೇ ವೇಳೆ ಕಲಾಭಿಮಾನಿಗಳಲ್ಲಿ ಮನವಿ ಮಾಡಿದರು.  ಜೊತೆ ಜೊತೆಯಲ್ಲಿ ಅನು ಖ್ಯಾತಿಯ ಮೇಘಾ ಶೆಟ್ಟಿ, ನಿರ್ದೇಶಕ ಆರೂರು ಜಗದೀಶ್, ಮಾರ್ಕೆಟಿಂಗ್ ಹಾಗೂ ಪಿಆರ್ ಮ್ಯಾನೇಜರ್ ಶ್ರೀರಾಮ್ ಸೇರಿದಂತೆ ಇತರರು ಇದ್ದರು.

Facebook Comments