ಇನ್ನು ಮುಂದೆ ಉಚಿತವಾಗಿ ಸಿಗಲ್ಲ ಅನ್ನಭಾಗ್ಯದ ಅಕ್ಕಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಡಿ ಈವರೆಗೂ ನೀಡಲಾಗುತ್ತಿದ್ದ ಉಚಿತ ಅಕ್ಕಿಗೆ ಇನ್ನು ಮುಂದೆ ಹಣ ಪಾವತಿಸಬೇಕಾಗುತ್ತದೆ.  ಅನ್ನಭಾಗ್ಯ ಯೋಜನೆಯಿಂದ ಸರಕಾರಕ್ಕೆ ಪ್ರತಿ ತಿಂಗಳು 120 ಕೋಟಿ ರೂ. ವೆಚ್ಚವಾಗುತ್ತಿದೆ. ಆದರೆ ಇಷ್ಟೆಲ್ಲಾ ವೆಚ್ಚ ಮಾಡಿದರೂ ಯೋಜನೆ ದುರ್ಬಳಕೆ ಆಗುತ್ತಿದ್ದು, ಅಕ್ಕಿ ದರ ವಿಧಿಸಿ ಪ್ರಯೋಗಿಸಿದರೆ ಹೇಗೆ ಎಂಬ ಚಿಂತನೆಯಲ್ಲಿ ತೊಡಗಿದೆ.

ಈಗಾಗಲೇ ಇಲಾಖೆ ಮಟ್ಟದಲ್ಲಿ ಚರ್ಚೆ ನಡೆಸಲಾಗಿದ್ದು, ಅಂತಿಮವಾಗಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ತೆಗೆದು ಕೊಳ್ಳುವ ನಿರ್ಧಾರದ ಮೇಲೆ ಈ ತೀರ್ಮಾನ ಅವಲಂಬಿತವಾಗಿದೆ. ಆದರೆ ಸರಕಾರ ಉಚಿತವಾಗಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯನ್ನೇ ರದ್ದು ಮಾಡಿ ಹೆಚ್ಚಿನ ದರ ನಿಗದಿ ಮಾಡುವ ಪ್ರಯತ್ನ ಮಾಡುತ್ತಿಲ್ಲ.

ಬದಲಾಗಿ ಅಕ್ಕಿಗೆ ವಿಧಿಸುವ ಕನಿಷ್ಟ ದರವನ್ನು ಸಂಗ್ರಹಿಸಿ, ಆ ಹಣವನ್ನು ವಾಪಸ್ ಫಲಾನು ಭವಿಗಳಿಗೆ ಬೇರೆ ರೂಪದಲ್ಲಿ ವಿತರಿಸಲು ಆಲೋಚಿಸುತ್ತಿದೆ. ಯೋಜನೆ ಸಾಧಕ-ಬಾಧಕಗಳ ಬಗ್ಗೆ ಅನೇಕ ತಜ್ಞರು ಸರಕಾರಕ್ಕೆ ಸಲಹೆ ನೀಡಿದ್ದು, ಅಕ್ಕಿಯನ್ನು ಉಚಿತವಾಗಿ ನೀಡುವ ಬದಲು ಕನಿಷ್ಠ ದರ ನಿಗದಿ ಮಾಡುವುದು ಸೂಕ್ತ ಎಂದು ಹೇಳಿದ್ದಾರೆ.

ಸದ್ಯ ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿ ನೀಡಲಾಗುತ್ತಿದೆ. ರಾಜ್ಯದಲ್ಲಿ 1.22 ಕೋಟಿ ಕುಟುಂಬದ 4.27 ಕೋಟಿ ಜನ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಬಿಪಿಎಲ್ ಕಾರ್ಡುದಾರರಿಗೆ ಅಕ್ಕಿ ಉಚಿತ ವಾಗಿದ್ದರೆ, ಸರಾಸರಿ ಬಡತನ ರೇಖೆ (ಎಪಿಎಲ್) ಕಾರ್ಡ್‍ಗಳ ಮೀರಿದ ಕುಟುಂಬಗಳಿಗೆ ಪ್ರತಿ ಕೆಜಿಗೆ 15 ರೂ.ಗೆ ಅಕ್ಕಿ ವಿತರಿಸಲಾಗುತ್ತಿದೆ.

ಪ್ರತಿ ತಿಂಗಳು ಸರ್ಕಾರಕ್ಕೆ 2.18 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮತ್ತು ಅದನ್ನು ಖರೀದಿಸಲು ಕೋಟ್ಯಂತರ ಹಣ ಬೇಕಾಗುತ್ತದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮೂಲಗಳ ಪ್ರಕಾರ ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಇತರ ಅಗತ್ಯ ವಸ್ತುಗಳನ್ನು ಪೂರೈಸಲು ತಜ್ಞರು ಸರ್ಕಾರಕ್ಕೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಸರ್ಕಾರ ಹಂಚಿಕೆ ಮಾಡಿದ ಅಕ್ಕಿ ಪ್ರಮಾಣ ಕುಟುಂಬಗಳ ಬಳಕೆಗಿಂತ ಹೆಚ್ಚಾಗಿದೆ. ಕೆಲವು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಂಗಡಿಗಳಲ್ಲಿ, ಯೋಜನೆಯಡಿ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ, ಇದು ಏಜೆಂಟರಿಗೆ ಹಣ ಮಾಡುವ ದಂಧೆಯಾಗಿ ಪರಿಣಮಿಸಿದೆ. ಮತ್ತೊಂದೆಡೆ ಸರ್ಕಾರ ಇದಕ್ಕಾಗಿ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದೆ. ಪ್ರತಿ ಕೆ.ಜಿ ಅಕ್ಕಿ ಸುಮಾರು 2-3 ರುಪಾಯಿ ದರ ವಿಧಿಸಿದರೇ ಸರ್ಕಾರಕ್ಕೆ ಆದಾಯ ಬರಲಿದೆ, ಈ ಹಣವನ್ನು ಬೇರೆ ಕಾರ್ಯಕ್ಕೆ ಬಳಸಿಕೊಳ್ಳ ಬಹುದು ಎಂದು ಮೂಲಗಳು ತಿಳಿಸಿವೆ.

ಸೂಕ್ಷ್ಮ ಪೋಷಕಾಂಶಗಳನ್ನು ಸೇರಿಸುವ ಅಕ್ಕಿಯನ್ನು ಫಲಾನುಭವಿಗಳಿಗೆ ಪರಿಚಯಿಸಲು ಸರ್ಕಾರ ಯೋಜಿಸುತ್ತಿದೆ. ಸರ್ಕಾರ ಈಗ ನೀಡುತ್ತಿರುವ ಅಕ್ಕಿಯಿಂದ ಫಲಾನುಭವಿಗಳಿಗೆ ನಿಗದಿತ ಪೋಷಕಾಂಶ ದೊರೆಯುತ್ತಿಲ್ಲ ಎಂದು ಇಲಾಖೆ ಮೂಲಗಳು ತಿಳಿಸಿವೆ. ಈ ಅಕ್ಕಿಗೆ ಅತ್ಯಲ್ಪ ಮೊತ್ತವನ್ನು ವಿಧಿಸಬೇಕೇ ಅಥವಾ ಸಾಮಾನ್ಯ ಅಕ್ಕಿ ನೀಡಬೇಕೆ ಎಂದು ನಾವು ಇನ್ನೂ ಚರ್ಚಿಸುತ್ತಿದ್ದೇವೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ಈ ತಿಂಗಳು ಪೂರ್ವ ಬಜೆಟ್ ಸಭೆಗಾಗಿ ನಮ್ಮನ್ನು ಕರೆಯಲಿದ್ದಾರೆ ಮತ್ತು ನಾವು ಈ ವಿಷಯದ ಬಗ್ಗೆ ಚರ್ಚಿಸುತ್ತೇವೆ ¿ಎಂದು ಮೂಲಗಳು ತಿಳಿಸಿವೆ. ನಾವು ಮೊದಲು ಐದು ಜಿಲ್ಲೆಗಳಲ್ಲಿ ಪೋಷಕಾಂಶಯುಕ್ತ ಅಕ್ಕಿಯನ್ನು ಪರಿಚಯಿಸಲು ಬಯಸುತ್ತೇವೆ ಮತ್ತು ನಂತರ ಅದನ್ನು ರಾಜ್ಯದಾದ್ಯಂತ ತೆಗೆದುಕೊಳ್ಳುತ್ತೇವೆ ಎಂದು ಮೂಲಗಳು ತಿಳಿಸಿವೆ.

2013 ರಲ್ಲಿ ಸಿದ್ದರಾಮಯ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಪರಿಚಯಿಸಿತು. ಈ ಯೋಜನೆಯಡಿ ಅಕ್ಕಿಯ ಜೊತೆಗೆ ಅಡುಗೆ ಎಣ್ಣೆ, ತೊಗರಿ ಬೇಳೆ, ಅಯೋಡಿನ್ ಉಪ್ಪು ನೀಡಲಾಗುತ್ತಿತ್ತು. ಆದರೆ 2015 ರಿಂದ ಕೇವಲ ಅಕ್ಕಿ ಮಾತ್ರ ಪೂರೈಸಲಾಗುತ್ತಿತ್ತು.

# ಉಡುಗೊರೆ ವಾಪಸ್..?:
ಸರಕಾರ ಅನ್ನಭಾಗ್ಯ ಅಕ್ಕಿಗೆ ಕನಿಷ್ಠ 2 ರಿಂದ 3 ರೂ.ದರ ವಿಧಿಸುವ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದ್ದು, ಇದರಿಂದ ಪ್ರತಿ ತಿಂಗಳು ಸಂಗ್ರಹವಾಗುವ ಸುಮಾರು 100 ಕೋಟಿ ರೂ.ಗಳನ್ನು ಹಬ್ಬದ ದಿನಗಳಲ್ಲಿ ಫಲಾನುಭವಿಗಳಿಗೆ ಇತರ ಪೌಷ್ಟಿಕ ಆಹಾರ ಧಾನ್ಯಗಳು ಹಾಗೂ ದಿನ ಬಳಕೆ ವಸ್ತುಗಳ ಪ್ಯಾಕೇಜ್ ಗಳನ್ನು ಉಡುಗೊರೆಯಾಗಿ ನೀಡಿದರೆ ಹೇಗೆ ಎನ್ನುವ ನಿಟ್ಟಿನಲ್ಲಿ ಆಲೋ ಚನೆ ನಡೆಯುತ್ತಿದೆ.

ಏಕೆಂದರೆ ನೆರೆಯ ಕೇರಳ ಸೇರಿದಂತೆ ಗೋವಾ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಕ್ಕಿಯನ್ನು ಉಚಿತವಾಗಿ ನೀಡುವ ಬದಲು ಕನಿಷ್ಠದರ ನಿಗದಿ ಮಾಡಿವೆ. ಇದೇ ಮಾದರಿ ಯಲ್ಲಿ ರಾಜ್ಯ ದಲ್ಲೂ ಮಾಡಿ, ಆ ಹಣವನ್ನು ಫಲಾನುಭವಿಗಳಿಗೇ ನೀಡಬೇಕೆಂದು ತಜ್ಞರು ಸರಕಾರಕ್ಕೆ ಹೇಳಿದ್ದಾರೆ.

ರಾಜ್ಯದಲ್ಲಿ 1.95 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಪ್ರತಿತಿಂಗಳು ಉಚಿತವಾಗಿ ವಿತರಿಸಲಾಗುತ್ತದೆ. ಕೇಂದ್ರ ಸರ್ಕಾರ ಪ್ರತಿ ಕೆಜಿ ಅಕ್ಕಿಗೆ 30 ರೂಪಾಯಿಯಂತೆ ಖರೀದಿಸಿ ಪ್ರತಿತಿಂಗಳು ರಾಜ್ಯಕ್ಕೆ ಮೂರು ರೂ. ದರದಲ್ಲಿ 2.17 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನೀಡುತ್ತದೆ. ಖರೀದಿ, ಸಾಗಾಣಿಕೆ, ಹಮಾಲಿ ವೆಚ್ಚ ಸೇರಿದಂತೆ ರಾಜ್ಯ ಸರ್ಕಾರ ಪ್ರತಿ ತಿಂಗಳು ಸುಮಾರು 159 ಕೋಟಿ ರೂ. ಖರ್ಚು ಮಾಡುತ್ತಿದೆ ಎನ್ನಲಾಗಿದೆ.

Facebook Comments