10ಕೆಜಿ ಅನ್ನಭಾಗ್ಯ ಅಕ್ಕಿ ನೀಡಬೇಕೆಂಬ ಪ್ರಸ್ತಾವನೆಯಿಂದ ಹಿಂದೆ ಸರಿದ ಸಿಎಂ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.6-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ ಪ್ರತಿ ಕುಟುಂಬದ ಫಲಾನುಭವಿಗಳಿಗೆ ಉಚಿತವಾಗಿ 10 ಕೆಜಿ ಅಕ್ಕಿ ನೀಡಬೇಕೆಂಬ ಪ್ರಸ್ತಾವನೆಯಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಿಂದೆ ಸರಿದಿದ್ದಾರೆ.

ಈಗಾಗಲೇ ರೈತರ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಪಡೆದಿದ್ದ 46 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿರುವುದರಿಂದ ರಾಜ್ಯಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿದ್ದು, ಪುನಃ ಉಚಿತ ಭಾಗ್ಯ ಯೋಜನೆಗಳಿಗೆ ಅನುದಾನ ಒದಗಿಸಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಒಂದು ವೇಳೆ ಅನ್ನ ಭಾಗ್ಯ ಯೋಜನೆಯಡಿ ಪ್ರತಿ ಕುಟುಂಬದ ಓರ್ವ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡಿದರೆ, ವಾರ್ಷಿಕವಾಗಿ ರಾಜ್ಯಸರ್ಕಾರದ ಬೊಕ್ಕಸಕ್ಕೆ ಸುಮಾರು 500 ಕೋಟಿಗೂ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿರುವ ಕಾರಣಕ್ಕಾಗಿಯೇ ಈ ತೀರ್ಮಾನಕ್ಕೆ ಸಿಎಂ ಬಂದಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅನ್ನಭಾಗ್ಯ ಯೋಜನೆಯಡಿ ಪ್ರತಿ ಕುಟುಂಬದ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ವಿತರಣೆ ಮಾಡಬೇಕೆಂದು ಖುದ್ದು ಸಿದ್ದರಾಮಯ್ಯನವರೇ ಕುಮಾರಸ್ವಾಮಿಯವರಿಗೆ ಪತ್ರ ಬರೆದಿದ್ದರು.

ಅಲ್ಲದೆ, ಸಮನ್ವಯ ಸಮಿತಿ ಸಭೆಯಲ್ಲೂ ಈ ಬಗ್ಗೆ ಚರ್ಚೆ ಮಾಡಿ 10 ಕೆಜಿ ಅಕ್ಕಿಯನ್ನು ನೀಡಬೇಕೆಂಬ ತೀರ್ಮಾನಕ್ಕೆ ಬರಲಾಗಿತ್ತು. ಆದರೆ ಆರ್ಥಿಕ ಶಿಸ್ತಿಗೆ ಒತ್ತು ನೀಡಿ, ದುಂದುವೆಚ್ಚಗಳಿಗೆ ಕಡಿವಾಣ ಹಾಕುತ್ತಿರುವ ಕುಮಾರಸ್ವಾಮಿಯವರು, ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚುವರಿ ಅಕ್ಕಿ ನೀಡಲು ಸಾಧ್ಯವಿಲ್ಲ ಎಂಬ ದೃಢ ನಿರ್ಧಾರಕ್ಕೆ ಬಂದಿದ್ದಾರೆ.

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಖರೀದಿಸಲು ರಾಜ್ಯಸರ್ಕಾರ ಪ್ರತಿ ಬಜೆಟ್‍ನಲ್ಲೂ ಸರಿಸುಮಾರು 1 ಸಾವಿರ ಕೋಟಿ ರೂ.ಗೂ ಅಧಿಕ ಹಣವನ್ನು ಮೀಸಲಿಡುತ್ತದೆ. ರಾಜ್ಯದಲ್ಲಿ ಸುಮಾರು ಒಂದೂವರೆ ಕೋಟಿಗೂ ಅಧಿಕ ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ರಾಜ್ಯ ಸರ್ಕಾರವು ಪ್ರತಿ ಕೆಜಿಗೆ 32.64ರ ದರದಲ್ಲಿ ಅಕ್ಕಿಯನ್ನು ಖರೀದಿಸುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಪ್ರತಿ ಕೆಜಿಗೆ 30 ರೂ. ಸಬ್ಸಿಡಿ ನೀಡಿದರೆ ಉಳಿದ ಹಣವನ್ನು ರಾಜ್ಯಸರ್ಕಾರ ಭರಿಸಬೇಕು. ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆಗೆ ಶೇ.90ರಷ್ಟು ಅನುದಾನ ನೀಡಿದರೆ, ರಾಜ್ಯದ ಪಾಲು ಶೇ.10ರಷ್ಟು ಮಾತ್ರ.

ಸಾಲದ ಹೊರೆ: ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ನಾಡಿನ ಜನತೆಗೆ ಮಾಡಿದ ವಾಗ್ದಾನದಂತೆ ಕುಮಾರಸ್ವಾಮಿಯವರು ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‍ಗಳ ಸುಮಾರು 45 ಸಾವಿರ ಕೋಟಿಗೂ ಅಧಿಕ ರೈತರ ಸಾಲ ಮನ್ನಾ ಮಾಡಿದ್ದಾರೆ.

ಈ ಹಣವನ್ನು ಬ್ಯಾಂಕ್‍ಗಳಿಗೆ ಸರ್ಕಾರವೇ ಪಾವತಿ ಮಾಡಬೇಕಾಗಿರುವುದರಿಂದ ಇತರೆ ಯೋಜನೆಗಳ ಮೇಲೆ ಒಂದಿಷ್ಟು ಪರಿಣಾಮ ಬೀರಿದೆ. ಹಾಗಾಗಿಯೇ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಉಚಿತ ಭಾಗ್ಯ ಯೋಜನೆಗಳಿಗೆ ಅನುದಾನದ ಕೊಕ್ಕೆ ಹಾಕಲಾಗಿದೆ.

ಇನ್ನು ಕುಮಾರಸ್ವಾಮಿಯವರು ತಾವು ಮಂಡಿಸಿದ ಬಜೆಟ್‍ನಲ್ಲೂ ಇಲಾಖಾವಾರುಗಳಿಗೆ ನೀಡಲಾಗುತ್ತಿದ್ದ ಅನುದಾನವನ್ನು ತುಸು ಮಟ್ಟಿಗೆ ಕಡಿತಗೊಳಿಸಿದ್ದರು. ಕೆಲವು ಪ್ರಮುಖ ಇಲಾಖೆಗಳನ್ನು ಹೊರತುಪಡಿಸಿದರೆ, ಬಿಳಿ ಆನೆಯಂತಿರುವ ಇಲಾಖೆಗಳಿಗೆ ಅನುದಾನದ ಕತ್ತರಿ ಪ್ರಯೋಗವಾಗಿತ್ತು.

ಈ ಎಲ್ಲಾ ಸಾಧಕ-ಬಾಧಕಗಳನ್ನು ಗಮನದಲ್ಲಿಟ್ಟುಕೊಂಡೇ ಸದ್ಯಕ್ಕೆ ಅನ್ನಭಾಗ್ಯಯೋಜನೆಯಡಿ ನೀಡಲಾಗುತ್ತಿರುವ ಅಕ್ಕಿಯನ್ನು ಯಥಾಸ್ಥಿತಿಯಲ್ಲೇ ಮುಂದುವರೆಸಲಿದ್ದಾರೆ. ಅಂದರೆ ಪ್ರತಿ ಫಲಾನುಭವಿ ಕುಟುಂಬಗಳಿಗೆ 7 ಕೆಜಿ ಅಕ್ಕಿ ವಿತರಿಸಲು ತೀರ್ಮಾನಿಸಲಾಗಿದೆ.

Facebook Comments