ಅಣ್ಣಾ ಮಲೈ ಹೇಳಿಕೆಗೆ ಜಯ ಕರ್ನಾಟಕ ಸಂಘಟನೆ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.30- ಮೇಕೆದಾಟು ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿಕೆಗೆ ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಜಗದೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿನಲ್ಲಿ ರಾಜಕೀಯ ಬೆರೆಸಿದ ಅಣ್ಣಾಮಲೈ ಅವರು ಕೂಡಲೇ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದ ಅಣ್ಣಾಮಲೈ ಅವರು ಕನ್ನಡಿಗರ ಭಾವನೆಗಳನ್ನು ಅರ್ಥ ಮಾಡಿಕೊಂಡಿಲ್ಲ. ಅವರಿಗೆ ಎಲ್ಲಾ ರೀತಿಯ ಬೆಂಬಲ, ಸಹಕಾರ ನೀಡಿ ಅವರ ಕೀರ್ತಿಯನ್ನು ಹೆಚ್ಚಿಸಿದ್ದು , ಕನ್ನಡಿಗರು ಎಂಬುದನ್ನು ಮರೆಯಬಾರದು. ರಾಜಕೀಯಕ್ಕಾಗಿ ಐಪಿಎಸ್ ಹುದ್ದೆಯನ್ನು ತೊರೆದು ತಮಿಳುನಾಡಿಗೆ ತೆರಳಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತು ಈಗ ಎರಡು ರಾಜ್ಯಗಳ ನಡುವೆ ಸಾಮರಸ್ಯ ಕದಡುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈಗಾಗಲೇ ಕುಡಿಯುವ ನೀರಿನ ವಿಚಾರದಲ್ಲಿ ಎರಡು ರಾಜ್ಯಗಳು ಪರಸ್ಪರ ಸಹಕಾರ ನೀಡಬೇಕು. ಆದರೆ ಕನ್ನಡಿಗರ ಭಾವನೆ ಹಾಗೂ ಸಹಿಷ್ಣುತೆಯನ್ನೇ ದೌರ್ಬಲ್ಯವೆಂದು ಪರಿಗಣಿಸಿ ನಮ್ಮ ಮೇಲೆ ದಬ್ಬಾಳಿಕೆ ನಡೆಸಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ದೃಢ ನಿರ್ಧಾರ ಕೈಗೊಂಡು ಮೇಕೆದಾಟು ಯೋಜನೆ ಕಾರ್ಯಗತಗೊಳಿಸುವತ್ತ ಹೆಚ್ಚು ಒತ್ತು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Facebook Comments