ಬಿಗ್ ಬ್ರೇಕಿಂಗ್ : ಅಧಿಕೃತವಾಗಿ ಬಿಜೆಪಿ ಸಿಂಗಂ ಅಣ್ಣಾಮಲೈ ಎಂಟ್ರಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.25- ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಸಿಂಗಂ ಖ್ಯಾತಿಯ ಅಣ್ಣಾಮಲೈ ಇಂದು ಅಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗುವುದರೊಂದಿಗೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿ ತಮ್ಮ ಜೀವನದ 2ನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.

ನವದೆಹಲಿಯಲ್ಲಿ ಬಿಜೆಪಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ಸೇರಿದಂತೆ ಕೆಲವು ಗಣ್ಯರ ಸಮ್ಮುಖದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆಯುವುದರೊಂದಿಗೆ ಬಿಜೆಪಿಗೆ ಸೇರ್ಪಡೆಯಾದರು.

ಕಳೆದ ಒಂದು ವರ್ಷದಿಂದ ಅಣ್ಣಾಮಲೈ ರಾಜಕೀಯಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗಳಿಗೆ ತೆರೆಬಿದ್ದಿದ್ದು, ತಮ್ಮ ತವರು ರಾಜ್ಯವಾದ ತಮಿಳುನಾಡಿನಲ್ಲಿ ಪಕ್ಷದ ಸಂಘಟನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಮುಂದಿನ ವರ್ಷದ 2021ರ ಮಧ್ಯಭಾಗದಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿಯ ಪ್ರಮುಖ ತಾರಾ ಪ್ರಚಾರಕರಾಗಿ ಪಕ್ಷವನ್ನು ಅಣ್ಣಾಮಲೈ ಮುನ್ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ದ್ರಾವಿಡರ ನಾಡಿನಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ನಾಯಕರಿಲ್ಲ. ಕಳೆದ ಒಂದು ವರ್ಷದಿಂದಲೇ ಆರ್‍ಎಸ್‍ಎಸ್ ಸ್ಥಳೀಯ ನಾಯಕರನ್ನು ಒಗ್ಗೂಡಿಸಿ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸುವ ಹೊಣೆಗಾರಿಕೆಯನ್ನು ಈಗಾಗಲೇ ಅವರು ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ಒಂದು ವರ್ಷದ ಹಿಂದೆಯೇ ಅಣ್ಣಾಮಲೈ ಅವರನ್ನು ಖುದ್ದು ಪ್ರಧಾನಿ ನರೇಂದ್ರಮೋದಿ ಹಾಗೂ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಅವರೇ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆಹ್ವಾನಿಸಿದ್ದರು ಎನ್ನಲಾಗಿದೆ.

ಐಪಿಎಸ್ ಅಕಾರಿಯಾಗಿದ್ದ ವೇಳೆ ಅವರ ದಕ್ಷತೆ, ಪ್ರಾಮಾಣಿಕತೆ, ಸಮಾಜದ ಬಗ್ಗೆ ಇಟ್ಟುಕೊಂಡಿರುವ ಕಳಕಳಿ, ಭ್ರಷ್ಟಾಚಾರದ ವಿರುದ್ಧ ಹೋರಾಟ ಸೇರಿದಂತೆ ಅಣ್ಣಾಮಲೈ ಅವರಲ್ಲಿದ್ದ ವಿಶೇಷ ಗುಣಗಳನ್ನು ಮೆಚ್ಚಿಯೇ ಮೋದಿ ಅವರು ಬಿಜೆಪಿಗೆ ಬರುವಂತೆ ಆಹ್ವಾನ ಕೊಟ್ಟಿದ್ದರು.

ಕರ್ನಾಟಕದ ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ಹಲವು ಕಡೆ ಕೆಲಸ ಮಾಡಿದ್ದರು. ಪ್ರಮುಖವಾಗಿ ಮಟ್ಕಾ, ಜೂಜು, ಅಕ್ರಮ ಮದ್ಯಕ್ಕೆ ಕಡಿವಾಣ, ಬಾಲ್ಯ ವಿವಾಹ ತಡೆಗಟ್ಟಿದ್ದು, ಜನರನ್ನು ಜಾಗೃತಿಗೊಳಿಸುವುದು ಸೇರಿದಂತೆ ಇವರ ಕೆಲವು ಸಾಮಾಜಿಕ ಕಾರ್ಯಗಳಿಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು.

ಹೀಗಾಗಿಯೇ ಅಣ್ಣಾಮಲೈ ಅವರನ್ನು ಅಭಿಮಾನದಿಂದ ಜನರು ಕರ್ನಾಟಕದ ಸಿಂಗಮ್ ಎಂದು ಕರೆಯುತ್ತಿದ್ದರು. ಬೆಂಗಳೂರಿನ ದಕ್ಷಿಣ ವಲಯದ ಡಿಸಿಪಿ ಆಗಿದ್ದ ವೇಳೆಯೇ 2019, ಮೇ 19ರಂದು ಐಪಿಎಸ್ ಹುದ್ದೆಗೆ ರಾಜೀನಾಮೆ ಕೊಟ್ಟು ಸ್ವಯಂ ನಿವೃತ್ತಿ ಪಡೆದಿದ್ದರು.

ಕರ್ನಾಟಕದಲ್ಲಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅಂದಿನಿಂದ ಇಂದಿನವರೆಗೂ ಅಣ್ಣಾಮಲೈ ರಾಜಕೀಯ ಸೇರ್ಪಡೆ ಕುರಿತಂತೆ ನಾನಾ ವದಂತಿಗಳು ಕೇಳಿಬಂದಿದ್ದವು.

Facebook Comments

Sri Raghav

Admin