ಪೊಲೀಸ್ ಸಿಬ್ಬಂದಿಗಳಿಗೆ ಎಸ್ಪಿ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.2- ವಸತಿ ಸಚಿವ ಸೋಮಣ್ಣ ಅವರ ಕಾರನ್ನು ಸಿದ್ದಗಂಗಾ ಮಠದೊಳಗೆ ಬಿಟ್ಟಿದ್ದಕ್ಕಾಗಿ ಇನ್ಸ್‍ಪೆಕ್ಟರ್ ಹಂತದ ಅಧಿಕಾರಿಗಳನ್ನು ಐಪಿಎಸ್ ಅಧಿಕಾರಿಯೊಬ್ಬರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮಧ್ಯಾಹ್ನ 12.30ಕ್ಕೆ ಸಿಎಂ ಯಡಿಯೂರಪ್ಪ ಹಾಗೂ ಇತರ ಸಚಿವರು ಭಾಗವಹಿಸುವ ವೇಳಾ ಪಟ್ಟಿಯಿತ್ತು.

ಎಲ್ಲರಿಗಿಂತ ಮೊದಲು ಬೆಳಗ್ಗೆ 11 ಗಂಟೆಗೆ ವಸತಿ ಸಚಿವ ಸೋಮಣ್ಣ ಮಠಕ್ಕೆ ಆಗಮಿಸಿದ್ದರು. ಮಠದ ಎರಡನೇ ಗೇಟ್ ಮೂಲಕ ಅವರ ಕಾರನ್ನು ಪೊಲೀಸ್ ಅಧಿಕಾರಿಗಳು ಒಳಗೆ ಬಿಟ್ಟಿದ್ದರು.  ಇದನ್ನು ಕಂಡ ಐಪಿಎಸ್ ಅಧಿಕಾರಿ ಅನೂಪ್ ಶೆಟ್ಟಿ ಅವರು ಕೆಂಡಾಮಂಡಲವಾದರು. ಯಾರನ್ನು ಕೇಳಿ ಕಾರು ಒಳಗೆ ಬಿಟ್ರಿ ಎಂದು ಭದ್ರತೆಗೆ ನಿಯೋಜನೆಗೊಂಡಿದ್ದ ಇನ್ಸ್‍ಪೆಕ್ಟರ್ ಹಂತದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಾನ್ಯಾರು ಗೊತ್ತಾ. ನೀವೇ ಭದ್ರತೆ ಮಾಡಿಕೊಳ್ಳಬೇಕಿತ್ತು. ನಮ್ಮನ್ನು ಯಾಕೆ ಕರೆಸಿಕೊಂಡಿರಿ. ನನ್ನ ಭುಜದ ಮೇಲಿರುವ ಬ್ಯಾಡ್ಜ್ ನಿಮಗೆ ಕಾಣುತ್ತಿದೆಯಾ. ಯಾರ ಕಾರನ್ನೂ ಒಳಗೆ ಬಿಡಬೇಡಿ ಎಂದು ಹತ್ತಾರು ಬಾರಿ ಹೇಳಿದ್ದೇನೆ.  ಆದರೂ ಕಾರು ಒಳಗೆ ಹೇಗೆ ಬಂತು. ಸರಿಯಾಗಿ ರಿಹರ್ಸಲ್‍ಗೆ ಬರಲ್ಲ, ಭದ್ರತೆಗೆ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಕೊಳ್ಳಲ್ಲ. ನಿಮ್ಮ ಯೋಗ್ಯತೆ ಇಷ್ಟು ಎಂದು ಛೀಮಾರಿ ಹಾಕಿದ್ದಾರೆ.

ಅನೂಪ್ ಶೆಟ್ಟಿ ತಮ್ಮ ಕಾರನ್ನು ಒಳಗೆ ಬಿಟ್ಟಿದ್ದಕ್ಕೆ ಕೆಳ ಹಂತದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದನ್ನು ತಿಳಿದುಕೊಂಡ ಸಚಿವ ಸೋಮಣ್ಣ, ನನ್ನ ಕಾರನ್ನು ಒಳ ಬಿಡಬಾರದು ಎಂದು ಹೇಳಲು ಅವನ್ಯಾರು ಎಂದು ಕಿಡಿಕಾರಿದ್ದಾರೆ.

Facebook Comments