ಗೋಹತ್ಯೆ ನಿಷೇಧಕ್ಕೂ ಮುನ್ನ, ಗೋಮಾಂಸ ರಫ್ತನ್ನು ನಿಷೇಧಿಸಲಿ : ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು, ಜ.6- ಒಂದು ವರ್ಗವನ್ನು ಗುರಿಯಾಗಿಟ್ಟುಕೊಂಡು ಗೋಹತ್ಯೆ ನಿಷೇಧ ಮಾಡುವ ಮುನ್ನ ಗೋಮಾಂಸ ರಫ್ತನ್ನು ನಿಷೇಧಿಸಲಿ ಮತ್ತು ಅನುಪಯುಕ್ತ ಜಾನುವಾರುಗಳನ್ನು ಸರ್ಕಾರವೇ ಖರೀದಿ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ. ಬಂಟ್ವಾಳದಲ್ಲಿ ಮೈಸೂರು ಕಂದಾಯ ವಿಭಾಗದ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಸಮಾವೇಶದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿರುವುದರ ಹಿಂದೆ ರಾಜಕಾರಣ ಅಡಗಿದೆ.

ದೇಶದಲ್ಲಿ 1964ರಿಂದಲೂ ಗೋಹತ್ಯೆ ನಿಷೇಧ ಕಾಯ್ದೆ ಇದೆ. ಹೊಸದಾಗಿ ಕಾನೂನು ತರುವ ಅಗತ್ಯ ಇರಲಿಲ್ಲ. ಒಂದು ವರ್ಗವನ್ನು ಗುರಿಯಾಗಿಟ್ಟುಕೊಂಡು ಸರ್ಕಾರ ಕಾನೂನು ರೂಪಿಸಿದೆ ಎಂದು ಆರೋಪಿಸಿದ್ದಾರೆ. ನಾವು ಗೋವನ್ನು ಪೂಜಿಸುತ್ತೇವೆ. ಎಲ್ಲಾ ಧರ್ಮದಲ್ಲೂ ಅವರದೇ ಆದ ನಂಬಿಕೆಗಳಿವೆ. ಅದರಲ್ಲಿ ರಾಜಕಾರಣ ಮಾಡಬಾರದು. ಗೋಹತ್ಯೆನಿಷೇಧ ಕಾನೂನು ಜಾರಿಗೆ ತರುವ ಮೊದಲು ವಿದೇಶಗಳಿಗೆ ರಫ್ತಾಗುತ್ತಿರುವ ಗೋಮಾಂಸವನ್ನು ನಿಷೇಧಿಸಲಿ.

ರೈತರ ಬಳಿ ಇರುವ ಅನುಪಯುಕ್ತವಾದ ಜಾನುವಾರುಗಳನ್ನು 25ರಿಂದ 50ರೂ. ಕೊಟ್ಟು ಸರ್ಕಾರವೇ ಖರೀದಿಸಲಿ. ಅವುಗಳನ್ನು ಬೇಕಾದರೆ ಸರ್ಕಾರದವರು ತಮ್ಮ ಮನೆಯಲ್ಲೇ ಇಟ್ಟುಕೊಳ್ಳಲಿ. ನಮ್ಮ ಆಕ್ಷೇಪಣೆ ಇಲ್ಲ. ಜಾತಿ, ಧರ್ಮ ಭೇದ ರಹಿತವಾಗಿ ಎಲ್ಲರೂ ಗೋವುಗಳನ್ನು ಸಾಕುತ್ತಾರೆ. ಅವರಿಗೆ ನಷ್ಟವಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕೆಂದು ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು.

ಗೋಹತ್ಯೆ ನಿಷೇಧ ಕುರಿತಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಅದರಲ್ಲಿ ತಪ್ಪಿಲ್ಲ. ನಮ್ಮ ಪಕ್ಷದಲ್ಲಿ ಎಲ್ಲರಿಗೂ ಅವರದೇ ಆದ ಅಭಿಪ್ರಾಯ ಹೇಳಲು ಅವಕಾಶವಿದೆ ಎಂದು ಹೇಳಿದರು.

Facebook Comments