ಮತಾಂತರಕ್ಕೆ IAS ಅಧಿಕಾರಿ ಪ್ರಚೋದನೆ : ತನಿಖೆಗೆ SIT ರಚಿಸಿದ ಯೋಗಿ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಕಾನ್ಪುರ, ಸೆ.28- ಹಿರಿಯ ಐಎಎಸ್ ಅಧಿಕಾರಿ ವಿರುದ್ಧ ಮತಾಂತರಕ್ಕೆ ಪ್ರಚೋದನೆ ನೀಡುತ್ತಿರುವ ಆರೋಪ ಕೇಳಿ ಬಂದಿದ್ದು, ಅದರ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ದಳ ರಚನೆ ಮಾಡಿದೆ. ಉತ್ತರ ಪ್ರದೇಶದ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿರುವ ಹಿರಿಯ ಐಎಎಸ್ ಅಧಿಕಾರಿ ಇಫ್ತಿಕರುದ್ದೀನ್ ವಿರುದ್ಧ ಆರೋಪ ಕೇಳಿ ಬಂದಿದೆ.

ಮಠ  ಮಂದಿರ ಸಮನ್ವಯ ಸಮಿತಿಯ ಉಪಾಧ್ಯಕ್ಷ ಭೂಪೇಶ್ ಅಶ್ವಥಿ ಈ ಕುರಿತು ವಿಡಿಯೋ ಬಿಡುಗಡೆ ಮಾಡಿದ್ದು, ಗಂಭೀರ ಆರೋಪ ಮಾಡಿದ್ದಾರೆ. ಕಾನ್ಪುರದಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಮೌಲಾನ ಧರ್ಮ ಪ್ರವಚನ ನೀಡುತ್ತಿದ್ದಾರೆ. ಒಂದು ಗುಂಪಿನ ಜನ ನೆಲದ ಮೇಲೆ ಕುಳಿತು ಕೇಳುತ್ತಿದ್ದಾರೆ. ಈ ವೇಳೆ ಅಧಿಕಾರಿ ಇಫ್ತಿಕರುದ್ದೀನ್ ಮಾತನಾಡುತ್ತಿದ್ದು, ಇಸ್ಲಾಂ ಧರ್ಮ ಅನುಸರಿಸಿದರೆ ಸಿಗುವ ಲಾಭಗಳ ಬಗ್ಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.

ವಿಡಿಯೋ ಬಿಡುಗಡೆ ಮಾಡಿರುವ ಭೂಪೇಶ್ ಅವರು, ಸದರಿ ಅಧಿಕಾರಿ ಹಿಂದು ಧರ್ಮದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು, ಬಲವಂತದ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ದೂರು ಆಧರಿಸಿ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ ಸಿಬಿಸಿಐಡಿ ಮಹಾನಿರ್ದೇಶಕ ಜಿ.ಎಲ್.ಮೀನಾ ಅವರ ನೇತೃತ್ವದಲ್ಲಿ ವಿಶೇಷ ತನಿಖಾತಂಡವನ್ನು ರಚಿಸಲಾಗಿದೆ. ಈ ವಿಡಿಯೋ ಅಸಲಿಯೇ ಅಥವಾ ಕೃತಕ ಸೃಷ್ಟಿಯೇ ಎಂಬ ಚರ್ಚೆಗಳು ನಡೆಯುತ್ತಿವೆ. ತನಿಖೆ ನಡೆಸಿ ಏಳು ದಿನಗಳ ಒಳಗೆ ವರದಿ ನೀಡುವಂತೆ ಸರ್ಕಾರ ತನಿಖಾ ದಳಕ್ಕೆ ಸೂಚನೆ ನೀಡಿದೆ.

Facebook Comments