ಸೆ.21ರಿಂದ ರಾಜ್ಯಾದ್ಯಂತ ಜನವಿರೋಧಿ ಕಾಯ್ದೆ ವಿರುದ್ಧ ಹೋರಾಟ
ಬೆಂಗಳೂರು, ಸೆ.14- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರಲು ನಿರ್ಧರಿಸಿರುವ ಜನ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಸೆ.21ರಿಂದ ರಾಜ್ಯಾದ್ಯಂತ ಜನಪರ ರ್ಯಾಲಿಗಳು ಮತ್ತು ಪರ್ಯಾಯ ಅಧಿವೇಶನಗಳನ್ನು ನಡೆಸಲಾಗುತ್ತಿದೆ.
ರೈತ, ಕಾರ್ಮಿಕ ಮತ್ತು ದಲಿತ ಸಂಘಟನೆಗಳು ಐಕ್ಯ ಹೋರಾಟ ರೂಪಿಸಿದ್ದು, ಸರ್ಕಾರ ಜನಧ್ವನಿಗೆ ಮನ್ನಣೆ ನೀಡದೆ ಇದ್ದರೆ ಸರ್ಕಾರವನ್ನು ಕಿತ್ತೊಗೆಯುವವರೆಗೂ ಚಳವಳಿ ಮುಂದುವರೆಯಲಿದೆ ಎಂದು ಸಂಘಟನೆಗಳ ಮುಖಂಡರು ಗಾಂಧಿ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ರೈತ, ಕಾರ್ಮಿಕ ಮತ್ತು ದಲಿತ ವರ್ಗಕ್ಕೆ ಸೇರಿದ 29 ಸಂಘಟನೆಗಳು ಐಕ್ಯ ಹೋರಾಟಕ್ಕೆ ನಿರ್ಧರಿಸಿವೆ. ಈಗಾಗಲೇ ಎರಡು ಮೂರು ಬಾರಿ ಸಭೆಗಳನ್ನು ನಡೆಸಲಾಗಿದೆ. ರಾಜ್ಯದ ಉದ್ದಗಲಕ್ಕೂ ರ್ಯಾಲಿಗಳನ್ನು ಆಯೋಜಿಸಿ ಶಕ್ತಿ ಪ್ರದರ್ಶನ ಮಾಡಲಾಗುವುದು ಎಂದು ಹೇಳಿದರು.
ರಾಜ್ಯದ್ಯಂತ 28 ಲಕ್ಷ ಕೃಷಿ ಪಂಪ್ಸೆಟ್ಗಳನ್ನು ನಾಶ ಮಾಡುವ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈಗಾಗಲೇ ಭೂ ಸುಧಾರಣೆ, ಎಪಿಎಂಸಿ ಕಾಯ್ದೆಗೆ ಮತ್ತು ಕಾರ್ಮಿಕರಿಗೆ ಮಾರಕವಾಗುವ ಕೈಗಾರಿಕಾ ಕಾನೂನುಗಳಿಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಇದು ಮಾಫಿಯಾ ಸರ್ಕಾರ. ಡ್ರಗ್ಸ್, ಭೂ ಕಬಳಿಕೆ ಮತ್ತು ಶಿಕ್ಷಣ ಮಾಫಿಯಾವನ್ನು ಸರ್ಕಾರ ನಡೆಸುತ್ತಿದೆ. ಈ ಸಂದರ್ಭದಲ್ಲಿ ಚಳವಳಿಗಳ ಅಗತ್ಯ ಇದೆ ಎಂದು ಹೇಳಿದರು.
ಡ್ರಗ್ಸ್ಗೆ ಸಂಬಂಧ ಪಟ್ಟಂತೆ ಭಾರೀ ಚರ್ಚೆ ನಡೆಯುತ್ತಿದೆ. ಈಗ ಜಾರಿಯಲ್ಲಿರುವುದು 1985ರ ಹಳೆಯ ಕಾಯ್ದೆ, ಅದನ್ನು ತಿದ್ದುಪಡಿ ಮಾಡಬೇಕಿದೆ ಎಂದು ಸಲಹೆ ನೀಡಿದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬಡಗಲಪುರ ನಾಗೇಂದ್ರ ಮಾತನಾಡಿ, ಆರ್ಥಿಕ ತಜ್ಞ ಪ್ರಕಾಶ್ ಕಮ್ಮರಡಿ ಅವರು ಆಗಸ್ಟ್ 29ರಂದು ರೈತ, ದಲಿತ, ಪ್ರಗತಿಪರರ ಮತ್ತು ಕಾರ್ಮಿಕರ ಮೊದಲ ಸಭೆ ಆಯೋಜಿಸಿದ್ದರು.
ಅನಂತರ ಹಲವಾರು ಸಭೆಗಳು ನಡೆದವು. ಅಲ್ಲಿ ಸಮಗ್ರ ಚರ್ಚೆಯಾಗಿದೆ. ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಜನ ವಿರೋಧಿ ಕಾನೂನುಗಳ ವಿರುದ್ಧ ಐಕ್ಯ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸೆ.21ರಿಂದ 30ರವರೆಗೆ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ ಕಾಯ್ದೆಗಳು ಅಂಗೀಕಾರಕ್ಕಾಗಿ ಮಂಡನೆಯಾಗುತ್ತಿವೆ. ಅವನ್ನು ವಿರೋಧಿಸಿ ಸದನದ ಹೊರಗೆ ಬೃಹತ್ ರ್ಯಾಲಿ ನಡೆಸಲಾಗುತ್ತದೆ. ಸೆ.21ರಿಂದ ರ್ಯಾಲಿ ಮತ್ತು ಜನತಾ ಅಧಿವೇಶನಕ್ಕೆ ಚಾಲನೆ ನೀಡಲಾಗುವುದು. ಯೋಗೇಂದ್ರ ಯಾದವ್, ದೇವನೂರು ಮಹದೇವ, ನ್ಯಾಯಮೂರ್ತಿ ನಾಗಮೋಹನ್ ದಾಸ್, ಎಸ್.ಆರ್.ಹಿರೇಮಠ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.
ರೈತ ಸಮುದಾಯದಿಂದ ಹೋಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ರೈತರ ಬದುಕಿಗೆ ವಿಷ ಹಾಕುತ್ತಿದ್ದಾರೆ. ಅಧಿಕಾರ ಮುಖ್ಯವಲ್ಲ, ನೀವು ರೈತ ಪರ ಎಂಬ ಹೆಸರನ್ನು ಕಳೆದುಕೊಳ್ಳುತ್ತಿರ. ಮೊದಲು ಜನ ವಿರೋಧಿ ಕಾನೂನುಗಳನ್ನು ಹಿಂಪಡೆಯಿರಿ ಎಂದು ಒತ್ತಾಯಿಸಿದರು.
ಟೌನ್ಹಾಲ್ನಲ್ಲಿ ಪ್ರತಿಭಟನೆ ನಡೆಸಬೇಕು ಎಂದರೆ 410 ಲಕ್ಷ ಪಾವತಿಸಬೇಕು ಎಂಬ ನಿಯಮವಿದ್ದರೆ ನಾವು ಅದನ್ನು ಪಾಲಿಸಲ್ಲ. ಚಳವಳಿ ನಮ್ಮ ಹಕ್ಕು, ಪ್ರತಿಭಟನೆ ನಡೆಸಲು ನಮಗೆ ಯಾರ ಅನುಮತಿಯೂ ಬೇಕಿಲ್ಲ. ಇವರು ನಿಯಮ ಮಾಡಿದ್ದರೆ ನಾವು ಅದನ್ನು ಉಲ್ಲಂಘನೆ ಮಾಡುತ್ತೇವೆ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಗುರುಪ್ರಸಾದ್ ಕೆರೆಗೋಡು ಮಾತನಾಡಿ, ಬೆಂಗಳೂರಿನಲ್ಲಿ ನಡೆಯುವ ಅಧಿವೇಶನಕ್ಕೆ ಪರ್ಯಾಯವಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅಧಿವೇಶನಗಳು ನಡೆಯಲಿವೆ. ಎಲ್ಲಾ ಶಾಸಕರ ಕಚೇರಿಗಳ ಮುಂದೆ ಒಂದು ಗಂಟೆ ಕಾಲ ಸಾಂಕೇತಿಕ ಧರಣಿ ನಡೆಸಿ ಜನ ವಿರೋಧಿ ಕಾನೂನುಗಳಿಗೆ ಬೆಂಬಲ ನೀಡಬೇಡಿ ಎಂದು ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.
ಬೆಂಗಳೂರಿನಲ್ಲಿ ನಡೆಯುವ ಪರ್ಯಾಯ ಅಧಿವೇಶನದಲ್ಲಿ ಕಾರ್ಮಿಕರ, ಭೂ ಸುಧಾರಣೆ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಒಂದೊಂದು ದಿನ ಚರ್ಚೆ ನಡೆಸಲಾಗುವುದು. ಅಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.
ಕಾರ್ಮಿಕ ಮುಖಂಡ ಕಾಳಪ್ಪ ಮಾತನಾಡಿ, ನೂರಾರು ವರ್ಷಗಳ ಹೋರಾಟದಿಂದ ಪಡೆದ ಕಾನೂನನ್ನು ಈಗಿನ ಸರ್ಕಾರ ಏಕಾಏಕಿ ಬದಲಾವಣೆ ಮಾಡುತ್ತಿದೆ. ಮಾಲೀಕರಿಗೆ ಮತ್ತು ಕಾರ್ಮಿಕರಿಗೆ ಅನುಕೂಲವಾಗುವಂತೆ ಹಿಂದೆಯೇ ಕಾನೂನು ರೂಪಿಸಲಾಗಿತ್ತು. ಈಗ ಅವನ್ನು ಬದಲಾವಣೆ ಮಾಡಿ ಮಾಲೀಕರಿಗೆ ಮಾತ್ರ ಅನುಕೂಲ ಮಾಡಿಕೊಡುತ್ತಿದೆ ಎಂದು ಆರೋಪಿಸಿದರು.
ಕೊರೊನಾ ಸಂದರ್ಭದಲ್ಲಿ 15 ಕೋಟಿ ಉದ್ಯೋಗ ನಷ್ಟವಾಗಿದೆ. ಹಲವಾರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಪ್ರಧಾನ ಮಂತ್ರಿ ಸುತ್ತಾ ಸುತ್ತುವ ಕೆಲವೇ ಕೆಲವು ಉದ್ಯಮಿಗಳಿಗೆ ಈ ಕಾನೂನುಗಳು ಲಾಭ ಮಾಡಿಕೊಡುತ್ತಿವೆ. ಕಾರ್ಮಿಕರ ಸ್ಥಿತಿ ಶೋಚನೀಯವಾಗಿವೆ ಎಂದು ಹೇಳಿದರು.
ದಸಂಸದ ಮುಖಂಡ ಲಕ್ಷೀನಾರಾಯಣ ನಾಗವಾರ ಮಾತನಾಡಿ, ಸರ್ಕಾರ ಕೊರೊನಾ ಸೋಂಕನ್ನು ಮುಂದಿಟ್ಟುಕೊಂಡು ಪ್ರತಿಭಟನೆಗಳನ್ನು ಹತ್ತಿಕ್ಕುತ್ತಿದೆ. ಸರ್ವಾಧಿಕಾರಿ ಧೋರಣೆಯಿಂದ ಜನ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.