ಮಹಿಳೆಯರಲ್ಲೇ ಕೊರೊನಾ ಸೋಂಕು ಹೆಚ್ಚು : ವಿಶ್ವಸಂಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಸಂಸ್ಥೆ,ಸೆ.1-ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೊರೊನಾ ಸೋಂಕು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.ಲಿಂಗ ಅಸಮಾನತೆ ಇದಕ್ಕೆ ಪ್ರಮುಖ ಕಾರಣವಾಗಿದ್ದು,  ಕೋವಿಡ್-19 ಸಾಂಕ್ರಾಮಿಕ ಸೋಂಕು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಎಲ್ಲರೂ ಎಚ್ಚೆತ್ತುಕೊಳ್ಳಬೇಕೆಂದು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೋ ಗುಟರ್ಸ್ ಕರೆ ನೀಡಿದ್ದಾರೆ.

ನಾವು ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಜೀವಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.  ಕೊರೊನಾ ನಿಗ್ರಹಿಸುವಲ್ಲಿ ಪ್ರತಿ ಮಹಿಳೆಯರ ಪಾತ್ರ ಅನನ್ಯವಾಗಿದೆ. ವಾರಿಯರ್ಸ್‍ಗಳಾಗಿ ಆರೋಗ್ಯ ಕಾರ್ಯಕರ್ತೆಯರು, ಶಿಕ್ಷಕಿಯರು, ಅಗತ್ಯ ಸಿಬ್ಬಂದಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಇಂದು ಮಹಿಳೆಯರಲ್ಲೇ ಕೋವಿಡ್ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದೆ.

ಅವರ ಕುಟುಂಬ ಮತ್ತು ಸಮುದಾಯಕ್ಕೂ ಹಬ್ಬುತ್ತದೆ ಎಂದು ಹೇಳಿದ್ದಾರೆ. ಶೇ.75ರಿಂದ 95ರಷ್ಟು ಮಹಿಳೆಯರು ಆರೋಗ್ಯ ಕಾರ್ಯಕರ್ತೆಯರಾಗಿದ್ದಾರೆ. ಸಾಂಕ್ರಾಮಿಕ ರೋಗವು ದೈಹಿಕ, ಮಾನಸಿಕ, ಶಿಕ್ಷಣ, ಕಾರ್ಮಿಕ ವರ್ಗ ಸೇರಿದಂತೆ ಎಲ್ಲಾ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ.

ಇಂದು ವಿಶ್ವಾದ್ಯಂತ ಲಕ್ಷಾಂತರ ವಿದ್ಯಾರ್ಥಿನಿಯರು, ಶಾಲೆಗೆ ಹೋಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೆಲವು ರಾಷ್ಟ್ರಗಳಲ್ಲಿ ಯುವತಿಯರಿಗೆ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ಹಿಂದೆ ಪಶ್ಚಿಮ ಆಫ್ರಿಕಾದಲ್ಲಿ ಎಬೊಲೊ ಕಾಣಿಸಿಕೊಂಡಾಗ ಅಲ್ಲಿ ವಿದ್ಯಾರ್ಥಿನಿಯರು ಶಾಲೆಗೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ವಿಶ್ವದಲ್ಲಿ ಲಿಂಗಾಧಾರಿತದ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದು ಅತ್ಯಂತ ನೋವಿನ ಸಂಗತಿ. ವಿಶೇಷವಾಗಿ ಮಹಿಳೆಯರನ್ನು ನಿಂದಿಸುವುದು, ದೈಹಿಕ ಹಲ್ಲೆ ನಡೆಸುವ ಪ್ರಕರಣಗಳು ಜರುಗುತ್ತಲೇ ಇವೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಗುಟರ್ಸ್ ಸಲಹೆ ಮಾಡಿದ್ದಾರೆ.

ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಸರಿಸಮಾನಾಗಿ ಬೆಳೆಯುತ್ತಿದ್ದಾಳೆ. ಮಹಿಳೆಯರು ಇನ್ನೊಬ್ಬರ ಮೇಲೆ ಅವಲಂಬಿತವಾಗದೆ ತಮ್ಮ ಸ್ವಸ್ವಾಮಥ್ರ್ಯದ ಮೇಲೆ ಸಾಧನೆ ಮಾಡುವ ವಾತಾವರಣವನ್ನು ನಿರ್ಮಿಸಬೇಕು.

ಕಳೆದ ಏಪ್ರಿಲ್‍ನಿಂದ ವಿಶ್ವದ ನಾನಾಕಡೆ ಕೊರೊನಾ ಸೋಂಕಿನ ಕುರಿತು ಮಹಿಳೆಯರು ಮೂಡಿಸಿರುವ ಜಾಗ್ರತೆ ಹಾಗೂ ಅವರ ಸೇವಾ ಮನೋಭಾವನೆಯನ್ನು ಯಾರೂ ಮರೆಯುವಂತಿಲ್ಲ. ಸಮಸಮಾಜ ನಿರ್ಮಾಣದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಯೊಂದು ಸರ್ಕಾರಗಳು ಮಹಿಳೆಯರ ಸುರಕ್ಷತೆಗೆ ಮೊದಲ ಆದ್ಯತೆ ಕೊಡಬೇಕು. ಕೋವಿಡ್-19 ನಿಯಂತ್ರಣದಲ್ಲಿ ಅಹೋರಾತ್ರಿ ಅವರು ಮಾಡಿರುವ ಸೇವೆಯನ್ನು ಸ್ಮರಿಸಬೇಕು. ಪ್ರಮುಖವಾಗಿ ಮಹಿಳೆಗೆ ಮನೆ ಹಾಗೂ ಅಗತ್ಯ ಸೇವೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Facebook Comments