500 ಕೋಟಿ ರೂ.ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.8- ಬಸವಕಲ್ಯಾಣದಲ್ಲಿ 500 ಕೋಟಿ ರೂ.ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಿಸಲು ನಿರ್ಧರಿಸಲಾಗಿದ್ದು, ಈ ಬಜೆಟ್‍ನಲ್ಲಿ 200 ಕೋಟಿ ಬಿಡುಗಡೆ ಮಾಡಲಾಗಿದ್ದು, ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.

ಕಿತ್ತೂರು ರಾಣಿ ಚೆನ್ನಮ್ಮ ಅಭಿವೃದ್ಧಿ ಪ್ರಾಧಿಕಾರದ ಅಡಿ ವಿವಿಧ ಕಾಮಗಾರಿಗಳಿಗಾಗಿ 50 ಕೋಟಿ, ಬಸವಣ್ಣ ಅವರ ಜನ್ಮ ಸ್ಥಳ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ಗ್ರಾಮವನ್ನು 5 ಕೋಟಿ ರೂ.ನಲ್ಲಿ ಅಭಿವೃದ್ಧಿಪಡಿಸುವುದು, ಮಂಡ್ಯ ಜಿಲ್ಲೆ ಆದಿಚುಂಚನಗಿರಿ ಶ್ರೀಕ್ಷೇತ್ರದಲ್ಲಿ ಆದಿಚುಂಚನಗಿರಿನಾಥ ಪಾರಂಪರಿಕ ಕೇಂದ್ರ ಸ್ಥಾಪಿಸಿ ನಾಥ ಪರಂಪರೆಯು ನಾಡಿನ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಪರಿಚಯಿಸಲು 10 ಕೋಟಿ ಸಹಾಯ ನೀಡಲಾಗುತ್ತಿದೆ.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಕರ್ನಾಟಕದ ಯಾತ್ರಾರ್ಥಿಗಳಿಗಾಗಿ ವಸತಿ ಸಮುಚ್ಚಯ ನಿರ್ಮಿಸಲು 10 ಕೋಟಿಗಳನ್ನು ಒದಗಿಸಲಾಗುತ್ತಿದೆ. ಈಗಾಗಲೇ ಅಲ್ಲಿನ ಸರ್ಕಾರ 5 ಎಕರೆ ಭೂಮಿ ನೀಡಿದ್ದು, ಅಲ್ಲಿ ಶೀಘ್ರವೇ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು.

ಡಾ.ಎಸ್.ಎಲ್.ಬೈರಪ್ಪ ಅವರ ಪರ್ವ ನಾಟಕವನ್ನು ರಂಗಾಯಣಗಳ ಮೂಲಕ ರಾಜ್ಯಾದ್ಯಂತ ಏರ್ಪಡಿಸಲು 1 ಕೋಟಿ ರೂ.ಗಳನ್ನು ನೀಡಲಾಗಿದೆ. ಆದಿಕವಿ ಪಂಪನಿಂದ ಮುದ್ದಣ್ಣನ ಕಾಲಘಟ್ಟದವರೆಗೆ ಎಲ್ಲಾ ಕೃತಿಗಳನ್ನು ಡಿಜಿಟಲೀಕರಿಸಿ ವಿಕಿಪೀಡಿಯಾ, ವಿಕಿಸೋರ್ಸ್ ಮೂಲಕ ಜಗತ್ತಿನ ಯಾವ ಭಾಗದಲ್ಲಾದರೂ ಲಭ್ಯವಾಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧರಿರುವುದಾಗಿ ಸಿಎಂ ತಿಳಿಸಿದ್ದಾರೆ.

ಹಿಂದೂಸ್ತಾನಿ ಸಂಗೀತದಲ್ಲಿ ಅನನ್ಯ ಸೇವೆ ಸಲ್ಲಿಸಿದ ಭಾರತ ರತ್ನ ಪಂಡಿತ್ ಭೀಮ್ ಸೇನ್ ಜೋಷಿ ಅವರ 100ನೇ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಸಂಗೀತೋತ್ಸವ, ವಿಚಾರ ಸಂಕಿರಣ ಆಯೋಜಿಸಲಾಗುತ್ತದೆ.

Facebook Comments

Sri Raghav

Admin