ಅಮಿತಾಬ್ ಪ್ರಶ್ನೆಗೆ ಉತ್ತರಿಸಿ ಕೋಟಿ ಗೆದ್ದ ಶಿಕ್ಷಕಿ
ಮುಂಬೈ, ನ.27- ಕೊರೊನಾ ಹಾವಳಿಯಿಂದಾಗಿ ಶಿಕ್ಷಕರ ಬದುಕು ಡೋಲಾಯಮಾನವಾಗಿರುವ ಸಮಯದಲ್ಲೇ ಸೂಪರ್ ಸ್ಟಾರ್ ಅಮಿತಾಬ್ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್ಪತಿಯಲ್ಲಿ ಶಿಕ್ಷಕಿಯೊಬ್ಬರು ಕೋಟಿ ಗೆಲ್ಲುವ ಮೂಲಕ ಗಮನ ಸೆಳೆದಿದ್ದಾರೆ.
ಕೆಬಿಸಿಯ 12ನೇ ಆವೃತ್ತಿಯಲ್ಲಿ ಶಿಕ್ಷಕಿ ಅನುಪಾದಾಸ್ ಒಂದು ಕೋಟಿ ಗೆಲ್ಲುತ್ತಿರುವ ಮೂರನೇ ಸ್ಪರ್ದಿಯಾಗಿದ್ದಾರೆ. ವಿಶೇಷವೆಂದರೆ ಕೋಟಿ ಗೆದ್ದ ಪ್ರವೀಣರೆಲ್ಲಾ ಮಹಿಳೆಯರು ಎಂಬುದೇ ಸೋಜಿಗ.
ಅನುಪಾದಾಸ್ಗೂ ಮುನ್ನ ದೆಹಲಿಯ ನಾಜಿಯಾ ನಜೀಮ್ ಹಾಗೂ ಐಪಿಎಸ್ ಅಕಾರಿ ಮೋಹಿತಾ ಶರ್ಮಾ ಅವರು ತಮ್ಮ ಬುದ್ಧಿ ಕೌಶಲ್ಯತೆ ಹಾಗೂ ಸಮಯ ಪ್ರಜ್ಞೆಯಿಂದಾಗಿ ಅಮಿತಾಬ್ಬಚ್ಚನ್ ಕೇಳಿದ ಕೋಟಿ ಪ್ರಶ್ನೆಗೆ ಉತ್ತರಿಸಿ ಕೋಟ್ಯಾಪತಿಗಳಾಗಿದ್ದಾರೆ. ಅನುಪಾದಾಸ್ ಅವರು ಚತ್ತೀಸ್ಘಡದ ಜದಲ್ಪುರದವರಾಗಿದ್ದು ನಿನ್ನೆ ನಡೆದ ಕೌನ್ ಬನೇಗಾ ಕರೋಡ್ಪತಿ ರಿಯಾಲ್ಟಿ ಷೋನಲ್ಲಿ ತಮ್ಮ ಬುದ್ಧಿಶಕ್ತಿ ಹಾಗೂ ಉತ್ತಮ ಸಮಯಗಳಲ್ಲಿ ಲೈಫ್ಲೈನ್ಗಳನ್ನು ಬಳಸಿಕೊಂಡು ಒಂದು ಕೋಟಿ ಗೆದ್ದು ಸಂಭ್ರಮಿಸಿದ್ದಾರೆ.
ಮೊದಲ ಹಂತದಿಂದ ಉತ್ತಮವಾಗಿ ಆಡಿದ ಅನುಪಾದಾಸ್ಗೆ ಕೋಟಿ ಪ್ರಶ್ನೆಯ ರೂಪದಲ್ಲಿ ಲಾಡಕ್ನಲ್ಲಿ ನವೆಂಬರ್ 18, 1962ರಂದು ಯಾರಿಗೆ ಪರಮವೀರ ಚಕ್ರ ನೀಡಿ ಗೌರವಿಸಲಾಯಿತು ಎಂಬ ಪ್ರಶ್ನೆಗೆ ಮೇಜರ್ ಶೈತಾನ್ ಸಿಂಗ್ ಎಂಬ ಉತ್ತರ ನೀಡುವ ಮೂಲಕ ಅವರು ಕೋಟ್ಯಾಪತಿಯಾಗಿ ಹೊರಹೊಮ್ಮಿದರು.
ರಜಿಯಾಪೂನಾವಲ ಹಾಗೂ ಶೌಕತ್ ದುಕನ್ವಾಲಾ ಅವರು ಕ್ರಿಕೆಟ್ ಲೋಕದಲ್ಲಿ ಯಾವ ತಂಡವನ್ನು ಪ್ರತಿನಿಸುತ್ತಾರೆ ಎಂಬ 7 ಕೋಟಿ ಪ್ರಶ್ನೆಗೆ ಉತ್ತರಿಸದೆ ಆಟವನ್ನು ಕ್ವಿಟ್ ಮಾಡಿದ್ದರಿಂದ ಕೋಟಿ ರೂ.ಗೆ ಅನುಪಾದಾಸ್ ತೃಪ್ತಿಪಟ್ಟುಕೊಂಡರು.
ಕೊನೆಗೆ 7 ಕೋಟಿ ಪ್ರಶ್ನೆಗೆ ಅಮಿತಾಬ್ಬಚ್ಚನ್ ಅವರೇ ಯುಎಇ ಎಂದು ತಿಳಿಸಿದರು.