ಅನುಶ್ರೀ ಡ್ರಗ್ಸ್ ಸೇವಿಸುತ್ತಿದ್ದರು ಎಂದು ನಾನು ಹೇಳಿಲ್ಲ : ಕಿಶೋರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.8- ನಿರೂಪಕಿ ಅನುಶ್ರೀ ನೃತ್ಯಾಭ್ಯಾಸದ ವೇಳೆ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದರು ಎಂದು ತಾವು ಹೇಳಲೇ ಇಲ್ಲ ಎಂದು ಕಿಶೋರ್ ಅಮನ್ ಶೆಟ್ಟಿ ಹೇಳಿಕೆ ನೀಡಿದ್ದಾನೆ. ಭಾರೀ ಚರ್ಚೆಯ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಆತ, 2009ರಲ್ಲಿ ಅನುಶ್ರೀ ಅವರಿಗೆ ನಾನು ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿದ್ದೇನೆ. ಅದನ್ನು ಹೊರತು ಪಡಿಸಿ ಅನುಶ್ರೀ ಅವರ ಬಗ್ಗೆ ನಾನು ಏನನ್ನೂ ಹೇಳಲಿಲ್ಲ. ಹೇಳಲಿಕ್ಕೆ ಯಾವ ಅಂಶಗಳೂ ಇಲ್ಲ. ಮಾದಕ ವಸ್ತುಗಳನ್ನು ಸೇವಿಸುತ್ತಿದ್ದರು. ನಮಗೂ ಕೊಡುತ್ತಿದ್ದರು ಎಂಬುದೆಲ್ಲಾ ಸುಳ್ಳು ಮಾಹಿತಿ ಎಂದಿದ್ದಾನೆ.

ಇದಕ್ಕೂ ಮೊದಲು ಕಿಶೋರ್ ಅಮನ್ ಶೆಟ್ಟಿ ಮಂಗಳೂರು ಸಿಸಿಬಿ ಪೊಲೀಸರಿಂದ ಡ್ರಗ್ಸ್ ಸಾಗಾಣಿಕೆ ಹಾಗೂ ಮಾರಾಟ ಪ್ರಕರಣದ ಸಂಬಂಧ ಬಂತನಾದ ವೇಳೆ 2020ರ ಸೆಪ್ಟೆಂಬರ್ 19ರಂದು ಸ್ವಯಿಚ್ಚಾ ಹೇಳಿಕೆ ನೀಡಿದ್ದು, ತನ್ನ ಹುಟ್ಟು, ಬೆಳವಣಿಗೆ, ವೃತ್ತಿ ಜೀವನದ ಬಗ್ಗೆ ಸುದೀರ್ಘ ಮಾಹಿತಿ ನೀಡಿದ್ದಾನೆ.

ಮುಂಬೈ, ಮಂಗಳೂರು, ಕೇರಳ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಅನೇಕ ಕಡೆ ಪ್ರದರ್ಶನ ನೀಡಿದ್ದೇನೆ. ಹಲವಾರು ಖಾಸಗಿ ಚಾನಲ್‍ಗಳ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದೇನೆ ಎಂದು ತಿಳಿಸಿದ್ದಾನೆ ಎಂದು ಹೇಳಲಾಗಿತ್ತು.

2007-08ರ ಸಮಯದಲ್ಲಿ ಬೆಂಗಳೂರಿನ ಸಂಜಯ್ ಅವರ ಮಾಲೀಕತ್ವದ ಎಕ್ಸ್‍ಲೆನ್ಸಿ ಡ್ಯಾನ್ಸ್ ಅಕಾಡೆಮಿಯಲ್ಲಿದ್ದಾಗ ಕೊರಿಯೋಗ್ರಾಫರಾಗಿದ್ದ ನನ್ನ ಸ್ನೇಹಿತ ತರುಣ್ ಅನುಶ್ರೀ ಅವರನ್ನು ತಮಗೆ ಪರಿಚಯ ಮಾಡಿಕೊಟ್ಟಿದ್ದ. ಅವರು ಕುಣಿಯೋಣ ಬಾರ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸ್ರ್ಪಯಾಗಿದ್ದರು. ಫೈನಲ್ ಸ್ಪರ್ಧೆಗೆ ಅವರಿಗೆ ನಾನು ಮತ್ತು ತರುಣ್ ನೃತ್ಯ ಹೇಳಿಕೊಟ್ಟಿದ್ದೆವು. ಅದರಲ್ಲಿ ಅವರು ಗೆಲುವು ಸಾಸಿದರು.

ನೃತ್ಯ ಅಭ್ಯಾಸ ಮಾಡುವ ಸಮಯದಲ್ಲಿ ತರುಣ್ ಅವರ ಬಾಡಿಗೆ ಮನೆಯಲ್ಲಿ ಅನುಶ್ರೀ ತಡರಾತ್ರಿವರೆಗೂ ನೃತ್ಯಾಭ್ಯಾಸ ಮಾಡುತ್ತಿದ್ದರು. ಊಟ ಮಾಡುವ ಮುನ್ನ ಮಾದಕ ವಸ್ತುಗಳಾದ ಎಕ್ಸಿಟಿಸಿ ಮಾತ್ರೆಗಳನ್ನು ಸೇವನೆ ಮಾಡುತ್ತಿದ್ದರು ಎಂದು ತಿಳಿಸಿದ್ದಾನೆ ಎಂದು ಲಿಖಿತ ಹೇಳಿಕೆಯಲ್ಲಿ ನಮೂದಾಗಿದೆ.

ಅನುಶ್ರೀ ಅವರು ನೃತ್ಯಾಭ್ಯಾಸಕ್ಕೆ ಬರುವಾಗ ಮಾತ್ರೆಗಳನ್ನು ಖರೀದಿಸಿ ತರುತ್ತಿದ್ದರು. ಅವು ಎಲ್ಲಿ ಸಿಗುತ್ತವೆ ಎಂಬ ಬಗ್ಗೆ ಅವರಿಗೆ ಹೆಚ್ಚು ಮಾಹಿತಿ ಇತ್ತು. ಡ್ರಗ್ ಪೆಡ್ಲರ್‍ಗಳ ಪರಿಚಯ ಕೂಡ ಅವರಿಗಿತ್ತು. ಈ ಮಾತ್ರೆಗಳನ್ನು ಸೇವಿಸುವುದರಿಂದ ಹೆಚ್ಚು ಸಮಯ ಡ್ಯಾನ್ಸ್ ಮಾಡಲು ಶಕ್ತಿ ಬರುತ್ತದೆ ಹಾಗೂ ಖುಷಿ ಸಿಗುತ್ತದೆ ಎಂದು ನಾವು ಮಾತನಾಡಿಕೊಳ್ಳುತ್ತಿದ್ದೆವು.

ಎರಡು ವರ್ಷಗಳ ಹಿಂದೆ ತರುಣ್ ಮಂಗಳೂರಿನ ಬಿಜೈನಲ್ಲಿ ಕ್ರೂಸ್ ಇನ್‍ಕ್ರೂ ಎಂಬ ಡ್ಯಾನ್ಸ್ ಕ್ಲಾಸ್ ಶುರುಮಾಡಿದಾಗ ನಿರೂಪಕಿ ಅನುಶ್ರೀ ಬಂದು ಅದನ್ನು ಉದ್ಘಾಟಿಸಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಅವರು ವಾಪಸ್ ಹೋದರು ಎಂದು ವಿವರಿಸಿದ್ದಾನೆ.

ಲಾಕ್‍ಡೌನ್ ಸಂದರ್ಭದಲ್ಲಿ ಕೆಲಸ ಇಲ್ಲದ ಸಂದರ್ಭದಲ್ಲಿ ಖರ್ಚಿಗೆ ಹಣ ಹೊಂದಿಸಿಕೊಳ್ಳಲು ಗಾಂಜಾ ಮತ್ತು ಎಂಎಂಡಿಎ ಮಾದಕ ವಸ್ತುಗಳನ್ನು ಮುಂಬೈನಿಂದ ಖರೀದಿಸಿ ಮಂಗಳೂರಿನಲ್ಲಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದೆವು ಎಂದು ಆತ ಹೇಳಿದ್ದಾನೆ.

ಈ ಹೇಳಿಕೆ ಆಧರಿಸಿ ಮಾಧ್ಯಮಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಪತ್ರಕರ್ತ ಇಂದ್ರಜಿತ್ ಲಂಕೇಶ್, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಹಾಗೂ ಮತ್ತಿತರರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.ಅನುಶ್ರೀ ಅವರ ವಿರುದ್ಧ ಮಂಗಳೂರು ಸಿಸಿಬಿಯಲ್ಲಿ ಯಾವುದೇ ಪ್ರಕರಣ ದಾಖಲಾಗದೇ ಇರುವ ಬಗ್ಗೆಯೂ ಕೂಡ ಚರ್ಚೆಗಳು ನಡೆಯುತ್ತಿವೆ.

ಮಂಗಳೂರು ಸಿಸಿಬಿ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಅಖಿಲ್, ಕಿಶೋರ್, ಮೊಹಮ್ಮದ್ ಸಾಕೀರ್, ಫ್ರಾಂಕಿ ಸಂಡೆ, ಶಮಿನ್ ಫರ್ನಾಂಡೀಸ್, ಶಹನವಾಸ್ ಸೇರಿದಂತೆ ಆರು ಮಂದಿ ಆರೋಪಿಗಳಿದ್ದಾರೆ. ಕಿಶೋರ್ ಅಮನ್ ಶೆಟ್ಟಿ ನೃತ್ಯಪಟುವಾಗಿದ್ದು, ಬಾಲಿವುಡ್‍ನ ಎಬಿಸಿಡಿ ಚಿತ್ರದಲ್ಲಿ ಸಹ ನಟನಾಗಿ ನಟಿಸಿರುವುದಾಗಿ ಹೇಳಿಕೊಂಡಿದ್ದಾನೆ.

Facebook Comments

Sri Raghav

Admin