ಸಾವುಗೆದ್ದ ಅನ್ವಿತಾ ಹುಟ್ಟುಹಬ್ಬ, ಅನಾಥ ಮಕ್ಕಳ ದತ್ತುಪಡೆದ ವಿದೇಶಿ ದಂಪತಿ, ಸಂಭ್ರಮಕ್ಕೆ ಸಿಂಧೂರಿ ಸಾಕ್ಷಿ

ಈ ಸುದ್ದಿಯನ್ನು ಶೇರ್ ಮಾಡಿ

Rohini-Sindhuri--01

ಹಾಸನ, ಜು.14- ಸಾವು ಗೆದ್ದ ಅನ್ವಿತಾಗೆ ಮೊದಲ ಹುಟ್ಟುಹಬ್ಬದ ಸಂಭ್ರಮ. ಅಬ್ಬಬ್ಬಾ… ಹಾಸನದ ತವರು ಚಾರಿಟಬಲ್ ಟ್ರಸ್ಟ್ ನಲ್ಲಿ ಸಂಭ್ರಮದ ಕ್ಷಣ…. ಹೆತ್ತವರಿಂದ ನಿರ್ಲಕ್ಷ್ಯಕ್ಕೆ ಒಳಗಾದ ಅನಾಥ ಮಕ್ಕಳಿಬ್ಬರ ಹುಟ್ಟುಹಬ್ಬ ಆಚರಣೆ… ಅಷ್ಟೇ ಅಲ್ಲ, ವಿದೇಶದಿಂದ ಆಗಮಿಸಿದ್ದ ದಂಪತಿಗಳು ಎರಡೂ ಅನಾಥ ಮಕ್ಕಳನ್ನು ದತ್ತು ಪಡೆದು ಹೊಸ ಜೀವನ ಒದಗಿಸಿದ ಅಪರೂಪದ ಕ್ಷಣ… ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಈ ಸಂಭ್ರಮಕ್ಕೆ ಸಾಕ್ಷಿಯಾದ ಕ್ಷಣವೂ ಹೌದು.

ಅನ್ವಿತಾ ಹಾಗೂ ಶರತ್‍ರ ಹುಟ್ಟುಹಬ್ಬದಂದು ಈ ಇಬ್ಬರನ್ನು ವಿದೇಶಿ ಜೋಡಿಗಳು ದತ್ತು ಸ್ವೀಕರಿಸಿದ್ದಾರೆ. ಅಮೆರಿಕದ ಹೊಸ ತಂದೆ-ತಾಯಿಗಳು ಇಂದು ತವರು ಚಾರಿಟಬಲ್ ಟ್ರಸ್ಟ್‍ನಲ್ಲಿ ನಡೆದ ಮೊದಲ ಹುಟ್ಟುಹಬ್ಬದಲ್ಲಿ ಪಾಲ್ಗೊಂಡು ಮಕ್ಕಳನ್ನು ಎದೆಗಪ್ಪಿಕೊಂಡು ಆನಂದಿಸಿದರು. ಇದರ ಜತೆಗೆ ನಂದಿನಿ ಎಂಬ ಮತ್ತೊಂದು ಅನಾಥ ಮಗುವನ್ನು ದತ್ತು ಸ್ವೀಕಾರ ಮಾಡಿದ್ದ ಅಮೆರಿಕದ ಪೋಷಕರು ಕೂಡ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದುದು ವಿಶೇಷವಾಗಿತ್ತು.

ಹುಟ್ಟುಹಬ್ಬ ಆಚರಿಸಿಕೊಂಡ ಮಗು ಅನ್ವಿತಾ ಕೂಡ ಅಮೆರಿಕ ದಂಪತಿಗಳಿಂದ ದತ್ತು ಸ್ವೀಕರಿಸಲ್ಪಟ್ಟಿದ್ದು, ವೀಸಾ ಪಡೆದ ನಂತರ ಕೆಲ ದಿನಗಳಲ್ಲಿ ಹಾಸನಕ್ಕೆ ಆಗಮಿಸಿ ಅನ್ವಿತಾಳನ್ನು ವಿದೇಶಕ್ಕೆ ಕರೆದೊಯ್ಯಲಿದ್ದಾರೆ. ಅನ್ವಿತಾ ಕಳೆದ ವರ್ಷ ಹೆತ್ತವರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಪೆÇದೆಗೆ ಬಿಸಾಡಲ್ಪಟ್ಟವಳು. ನವಿಲುಗಳಿಗೆ ಆಹಾರವಾಗಿ ಸಾವನ್ನು ಎದುರು ನೋಡುತ್ತ ರಕ್ತದ ಮಡುವಿನಲ್ಲಿ ಬಿದ್ದಿದ್ದ ಕಂದ ಸಾರ್ವಜನಿಕರಿಂದ ರಕ್ಷಿಸಲ್ಪಟ್ಟು ಹೊಳೆನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆದು ನಂತರ ಹಾಸನದ ಜಿಲ್ಲಾಸ್ಪತ್ರೆಗೆ ರವಾನಿಸಲ್ಪಟ್ಟಿತ್ತು. ತೀವ್ರ ನಿಗಾ ಘಟಕದಲ್ಲಿ ವೈದ್ಯರು, ಶುಶ್ರೂಷಕರ ವಿಶೇಷ ಕಾಳಜಿ, ಚಿಕಿತ್ಸೆ ಆರೈಕೆಯಿಂದ ಬದುಕುಳಿದಿದ್ದ ದೇವರ ಕಂದ ಅನ್ವಿತಾ.

ಡಾ.ಪಾಲಾಕ್ಷಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿರುವ ತವರು ಚಾರಿಟಬಲ್ ಟ್ರಸ್ಟ್‍ನಲ್ಲಿ ಆಶ್ರಯ ಪಡೆದು ಇಂದು ಮೊದಲ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆ. ಅದೂ ಜಿಲ್ಲಾಧಿಕಾರಿಗಳು, ಹಲವು ಅಧಿಕಾರಿಗಳು, ವಿಶೇಷ ಅತಿಥಿಗಳ ಸಮ್ಮುಖದಲ್ಲಿ. ಸದ್ಯದಲ್ಲೇ ಅಮೆರಿಕಕ್ಕೆ ಹಾರಲಿದ್ದಾಳೆ. ಹೆತ್ತವರು ಎಸೆದು ಹೋದರೇನು? ಇದು ಅವಳ ಹಣೆಬರಹ. ಹೊಸ ಬದುಕಿನ ಹಾದಿ ಹಿಡಿದಿದ್ದಾಳೆ. ಅನ್ವಿತಾಳ ಜೀವನದ ದಿಕ್ಕು ಬದಲಾಗಿದೆ. ಎಲ್ಲ ರೀತಿಯ ಯಶಸ್ಸು ಸಿಕ್ಕರೆ ಹಲವರ ಪ್ರಯತ್ನ ಸಾರ್ಥಕವಾಗುತ್ತದೆ. ಈ ಕಾರ್ಯಕ್ರಮದಲ್ಲಿ ವಿಶೇಷ ಆಸಕ್ತಿಯಿಂದ ಪಾಲ್ಗೊಂಡು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮಕ್ಕಳ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು.

ಅನ್ವಿತಾ ನವಜಾತ ಶಿಶುವಾಗಿದ್ದಾಗ ಅನುಭವಿಸಿದ ನೋವುಗಳನ್ನು ಕಣ್ಣಾರೆ ಕಂಡವರು ಜಿಲ್ಲಾಧಿಕಾರಿ ಆಗಲೇ ಕಾಳಜಿ ವಹಿಸಿ ವೈದ್ಯಾಧಿಕಾರಿಗಳಿಗೆ ತಿಳಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಿ ನಿರಂತರ ಮಾಹಿತಿ ಪಡೆದಿದ್ದರು. ಅದನ್ನು ಸಿಂಧೂರಿ ಅವರು ನೆನಪು ಮಾಡಿಕೊಂಡು ಅನ್ವಿತಾಳ ಇಂದಿನ ನಗುವಿಗೆ, ಯಶಸ್ವಿಗೆ ಕಾರಣರಾದ ಎಲ್ಲ ವೈದ್ಯರು ಹಾಗೂ ತವರು ಚಾರಿಟಬಲ್ ಟ್ರಸ್ಟ್‍ಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿಮ್ಸ್‍ನ ಶಿಶು ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಪ್ರಸನ್ನ ಅವರು ಜಿಲ್ಲಾಧಿಕಾರಿಗಳು ಅನ್ವಿತಾಳ ಬಗ್ಗೆ ತೋರಿದ ಮಮತೆ, ಹಾಸನಾಂಬ ವೈದ್ಯಕೀಯ ಆಸ್ಪತ್ರೆಯ ನವಜಾತ ಶಿಶುವಿನ ಚಿಕಿತ್ಸಾ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಕೈಗೊಂಡ ಕ್ರಮ, ಅನ್ವಿತಾ ಸೇರಿದಂತೆ ಸಂಕಷ್ಟದಲ್ಲಿದ್ದ ನವಜಾತ ಶಿಶುಗಳ ಬಗ್ಗೆ ತೋರಿದ ಕಾಳಜಿಯನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.  ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಶಂಕರ್, ಮಕ್ಕಳ ತಜ್ಞರಾದ ಡಾ.ಕುಮಾರ್, ಡಾ.ಮನು ಪ್ರಕಾಶ್, ತವರು ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥರಾದ ಡಾ.ಪಾಲಾಕ್ಷ ಹಾಜರಿದ್ದರು.

Facebook Comments

Sri Raghav

Admin