“ಸದ್ಯಕ್ಕೆ ಯಾವುದೇ ರೇಷನ್ ಕಾರ್ಡ್ ರದ್ದು ಮಾಡಲ್ಲ, ಪಡಿತರ ವಿತರಣೆಯಲ್ಲಿ ದಾಖಲೆ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.27- ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಎಪಿಎಲ್ ಮತ್ತು ಬಿಪಿಎಲ್‍ಪಡಿತರದಾರರಿಗೆ ಆಹಾರ ಧಾನ್ಯಗಳ ವಿತರಣೆ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದ್ದು , ಇಡೀ ರಾಜ್ಯದಲ್ಲಿ ಶೇ.94ಕ್ಕೂ ಹೆಚ್ಚು ಮಂದಿ ಇದರ ಪ್ರಯೋಜನ ಪಡೆದಿರುವುದು ಹೊಸ ದಾಖಲೆಯಾಗಿದೆ.

ಈ ಸಂಜೆಯೊಂದಿಗೆ ಮಾತನಾಡಿದ , ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋಪಾಲಯ್ಯ ಅವರು ರಾಜ್ಯದಲ್ಲಿ 1.27 ಕೋಟಿ ಬಿಪಿಎಲ್ ಕಾರ್ಡ್‍ದಾರರಿದ್ದು , ಈಗಾಗಲೇ ಸರ್ಕಾರದಿಂದ ಎರಡು ತಿಂಗಳ ಪಡಿತರ ಉಚಿತವಾಗಿ ವಿತರಣೆ ಕಾರ್ಯ ನಿರಂತರವಾಗಿ ಮುಂದುವರೆದಿದೆ. ಶೇ.94ರಷ್ಟು ಪಡಿತರದಾರರು ಇದರ ಪ್ರಯೋಜನ ಪಡೆದಿರುವುದು ರಾಜ್ಯದಲ್ಲಿ ಹೊಸ ದಾಖಲೆಯಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಜನರ ಸಂಕಷ್ಟ ಅರಿತು ಬಿಪಿಎಲ್ ಪಡಿತರ ಕಾರ್ಡ್‍ಗಾಗಿ ಹೊಸದಾಗಿ ಅರ್ಜಿ ಸಲ್ಲಿಸಿದ 18.90 ಲಕ್ಷ ಕುಟುಂಬಗಳಿಗೂ ಪಡಿತರ ನೀಡುತ್ತಿದ್ದು, ಈ ಪೈಕಿ 31,668 ಮಂದಿ ಈವರೆಗೆ ಆಹಾರ ಧಾನ್ಯಗಳನ್ನು ಪಡೆದಿದ್ದಾರೆ. ಉಳಿದವರು ಕೂಡ ಪಡಿತರ ಅಂಗಡಿಗಳಿಗೆ ತೆರಳಿ ಆಹಾರ ಧಾನ್ಯ ಪಡೆಯಬಹುದಾಗಿದೆ ಎಂದು ಸಚಿವ ಗೋಪಾಲಯ್ಯ ಅವರು ತಿಳಿಸಿದ್ದಾರೆ.

ಮತ್ತೊಂದು ಮಹತ್ವದ ವಿಷಯವೆಂದರೆ ಸದ್ಯಕ್ಕೆ ಯಾವುದೇ ಪಡಿತರ ಕಾರ್ಡ್ ಅನ್ನು ರದ್ದು ಮಾಡದಿರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾರೂ ಕೂಡ ಸದ್ಯ ಅದರ ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದು ಸಚಿವರು ತಿಳಿಸಿದರು. ಎಪಿಎಲ್ ಕಾರ್ಡ್‍ದಾರರಿಗೂ ತಲಾ 5 ಕೆ.ಜಿ. ಅಕ್ಕಿಯನ್ನು ಕೆ.ಜಿಗೆ 15 ರೂ.ನಂತೆ ನೀಡಲಾಗುತ್ತಿದೆ.

ಇನ್ನು ಎಪಿಎಲ್ ಕಾರ್ಡ್‍ಗಾಗಿ ಅರ್ಜಿ ಸಲ್ಲಿಸಿರುವ 20,000 ಮಂದಿಯಲ್ಲಿ 5,080 ಮಂದಿ ತಮಗೆ ಪಡಿತರ ಬೇಕೆಂದು ಮನವಿ ಮಾಡಿದ್ದಾರೆ. ಅವರಿಗೂ ಕೂಡ ಪಡಿತರ ವಿತರಿಸಲಾಗುವುದು ಎಂದರು. ರಾಜ್ಯಾದ್ಯಂತ ಈಗಾಗಲೇ ಎಲ್ಲೂ ಕೂಡ ಪಡಿತರ ಕೊರತೆಯಾಗದಂತೆ ನಿಗಾ ವಹಿಸಲಾಗಿದೆ.

ಅಧಿಕಾರಿಗಳು ಜನರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ. ಸದ್ಯಕ್ಕೆ ಹಣಕಾಸಿನ ಕೊರತೆಯೂ ಇಲ್ಲ. ಕೇಂದ್ರ ಸರ್ಕಾರದ ಪಾಲು ಹಾಗೂ ರಾಜ್ಯ ಸರ್ಕಾರದ ಪಾಲಿನಿಂದ ಇನ್ನು ಮೂರು ತಿಂಗಳ ಪಡಿತರ ವಿತರಣೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ತಿಳಿಸಿದರು.

ಕೆಲವರು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದು , ಅದರ ಬಗ್ಗೆ ಸಾರ್ವಜನಿಕರು ತಲೆ ಕೆಡಿಸಿಕೊಳ್ಳಬಾರದು. ಸರ್ಕಾರಕ್ಕೆ ಬಡವರ ಬಗ್ಗೆ ವಿಶೇಷ ಕಾಳಜಿ ವಹಿಸಿದೆ. ಯಾವುದೇ ರೀತಿಯ ಅಕ್ರಮಗಳನ್ನು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.

Facebook Comments

Sri Raghav

Admin