ಕೋವಿಡ್ ಪರೀಕ್ಷೆಗೆ ದುಬಾರಿ ಶುಲ್ಕ ವಸೂಲಿ ಆರೋಪ, ಅಪೋಲೋ ಆಸ್ಪತ್ರೆಗೆ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.7- ಕೋವಿಡ್ ಪರೀಕ್ಷೆಗೆ ದುಬಾರಿ ಶುಲ್ಕ ವಸೂಲಿ ಮಾಡುವ ಆಸ್ಪತ್ರೆ ಮತ್ತು ಲ್ಯಾಬ್‍ಗಳ ವಿರುದ್ಧ ನಿರ್ಧಾಕ್ಷೀಣ್ಯವಾಗಿ ಕ್ರಮ ಜರುಗಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಎಚ್ಚರಿಸಿದ್ದಾರೆ. ಜೊತೆಯಲ್ಲಿ ಅಪೋಲೋ ಆಸ್ಪತ್ರೆಗೆ ನೀಡಿರುವ ನೋಟಿಸ್‍ನ ಪ್ರತಿಯನ್ನು ಪ್ರಕಟಿಸಿದ್ದಾರೆ.

ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಖಾಸಗಿ ಲ್ಯಾಬ್ ಮತ್ತು ಆಸ್ಪತ್ರೆಗಳಲ್ಲಿ ಒಬ್ಬ ವ್ಯಕ್ತಿಯ ಕೋವಿಡ್ ಪರೀಕ್ಷೆಗೆ ಗರಿಷ್ಠ 4500 ರೂಪಾಯಿಗಳ ದರ ನಿಗದಿ ಮಾಡಲಾಗಿದೆ. ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಿದ ಖಾಸಗಿ ಆಸ್ಪತ್ರೆಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ.

ನಿಯಮ ಉಲ್ಲಂಘಿಸುವ ಖಾಸಗಿ ಆಸ್ಪತ್ರೆ ಹಾಗೂ ಲ್ಯಾಬ್ಗ್‍ಳ ಮೇಲೆ ನಿರ್ಧಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಟ್ವಿಟ್ ಮಾಡಿದ್ದಾರೆ. ಜೊತೆಗೆ ಅಪೋಲೋ ಆಸ್ಪತ್ರೆಗೆ ನೀಡಿರುವ ನೋಟಿಸ್‍ನ್ನು ಪೋಸ್ಟ್ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಚ್ 21ರಂದು ಹೊರಡಿಸಿರುವ ಸುತ್ತೋಲೆ ಆಧರಿಸಿ ರಾಜ್ಯ ಸರ್ಕಾರ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಮತ್ತು ಲ್ಯಾಬ್‍ಗಳಿಗೆ ಮಾರ್ಚ್ 31ರಂದು ಪತ್ರ ಬರೆದಿದೆ. ಅದರ ಹೊರತಾಗಿಯೂ ಅಪೋಲೋ ಆಸ್ಪತ್ರೆ ಜೂನ್ 25ರಂದು ಪರೀಕ್ಷೆ ನಡೆಸಿ ಆರು ಸಾವಿರ ರೂಪಾಯಿ ಶುಲ್ಕ ವಸೂಲಿ ಮಾಡಿದೆ ಎಂದು ನೋಟಿಸ್‍ನಲ್ಲಿ ಅಸಮಾದಾನ ವ್ಯಕ್ತ ಪಡಿಸಲಾಗಿದೆ.

ಅಪೋಲೋ ಆಸ್ಪತ್ರೆ ಐಸಿಎಂಆರ್‍ನ ಮಾರ್ಗಸೂಚಿಗಳನ್ನು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶನಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ. ಎರಡು ದಿನಗಳ ಒಳಗಾಗಿ ನೋಟಿಸ್‍ಗೆ ಉತ್ತರ ನೀಡದೆ ಇದ್ದರೆ ನಿಯಮಾನುಸಾರ ಸ್ವಯಂ ಕ್ರಮ ಜರುಗಿಸಲಾಗುತ್ತದೆ ಎಂದು ನೋಟಿಸ್‍ನಲ್ಲಿ ಎಚ್ಚರಿಸಲಾಗಿದೆ.

Facebook Comments