‘ದೇಶ ಬಡವಾಗುತ್ತಿದೆ, ವ್ಯಕ್ತಿ ಶ್ರೀಮಂತನಾಗುತ್ತಿದ್ದಾನೆ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.6-ದೇಶ ಬಡವಾಗುತ್ತಿದೆ. ವ್ಯಕ್ತಿ ಶ್ರೀಮಂತನಾಗುತ್ತಿದ್ದಾನೆ. ಆಸ್ತಿ ಘೋಷಣೆ ಮಾಡದ ಬಹಳಷ್ಟು ಕುಬೇರರು ಇದ್ದಾರೆ ಎಂದು ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ವಿಧಾನಸಭೆಯಲ್ಲಿಂದು ತಿಳಿಸಿದರು.  ಭಾರತ ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನರು ಪಾವತಿಸಿದ ತೆರಿಗೆ ಹಣ ಅಭಿವೃದ್ಧಿಗೆ ಬಳಸುವ ಬದಲು ಸ್ವಾರ್ಥಕ್ಕೆ ಬಳಕೆಯಾಗುತ್ತಿದೆ. ನಡೆನುಡಿಯ ನಡುವೆ ಕಿ.ಮೀಗಳ ಅಂತರವಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಅವಕಾಶ ಸಿಕ್ಕಾಗ ಪಾತಿವ್ರತ್ಯ ಪ್ರದರ್ಶಿಸಬೇಕಲ್ಲವೇ. ಇತ್ತೀಚೆಗೆ ಸಾರ್ವಜನಿಕ ಜೀವನದ ಮೌಲ್ಯಗಳು ನಶಿಸುತ್ತಿವೆ ಎಂದರು.  ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡಲು ವಿ.ಪಿ.ಸಿಂಗ್ ಅವರು ಪ್ರಧಾನಿಯಾಗಿ ಬರಬೇಕಾಯಿತು. ಆದರೆ ಅದರ ಹಿಂದಿನ ಸರ್ಕಾರಗಳಿಗೆ ಏಕೆ ಕೊಡಲಾಗಲಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ.

ಅಂಬೇಡ್ಕರ್ ಅವರು ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಸೋಲಿಸಲಾಯಿತು. ಅಂಥಹ ಮಹಾನುಭಾವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕಿತ್ತು ಎಂದು ಹೇಳಿದರು. ಅವರು ನಿಧನರಾದಾಗ ಪಾರ್ಥೀವ ಶರೀರದ ಸಂಸ್ಕಾರಕ್ಕೂ ಜಾಗ ಕೊಡಲಿಲ್ಲ. ಬಾಂಬೆ ಕಡಲ ಮರಳು ದಿಬ್ಬದ ಮೇಲೆ ಅವರ ಸಂಸ್ಕಾರ ಮಾಡಲಾಗಿದೆ ಎಂದು ಅರಗ ಜ್ಞಾನೇಂದ್ರ ಬೇಸರ ವ್ಯಕ್ತಪಡಿಸಿದರು.  ಆಗ ಸಭಾಧ್ಯಕ್ಷ ವಿಶೇಶ್ವೇರ ಹೆಗಡೆ ಕಾಗೇರಿ ಅವರು ಶಿವಮೊಗ್ಗ ಅರಗದವರು ಎಂಬುದನ್ನು ಮತ್ತೊಮ್ಮೆ ತೋರಿಸಿದ್ದೀರಿ ಎಂದು ಮೆಚ್ಚುಗೆ ಸೂಚಿಸಿದರು.

Facebook Comments