35ನೇ ವರ್ಷದ ಸಂಭ್ರಮದಲ್ಲಿ ಅರಗಿಣಿ ಸಿನಿಮಾ ವಾರಪತ್ರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನಿಮ್ಮ ಅಚ್ಚುಮೆಚ್ಚಿನ `ಅರಗಿಣಿ’ ಜನ್ಮ ತಳೆದು ಮೂರೂವರೆ ದಶಕ ಕಳೆಯಿತು. ಈಗ ಪತ್ರಿಕೆಗೆ 35ನೆ ವರ್ಷದ ಜನ್ಮದಿನ. ಓದುಗ ಪ್ರಭುಗಳು ನೀರೆರೆದು ಬೆಳೆಸಿದ ಸಸಿ ಈಗ ವೃಕ್ಷವಾಗಿ ಬೆಳೆದಿದೆ. ಇದು ಕನ್ನಡದ ಏಕೈಕ ಸಿನಿಮಾ, ಸಾಂಸ್ಕøತಿಕ ಹಾಗೂ ಕಲಾ ಸಾಪ್ತಾಹಿಕ. 34 ವರ್ಷದ ಹಾದಿಯಲ್ಲಿ ಪತ್ರಿಕೆಯು ವಸ್ತುನಿಷ್ಠವಾದ ವರದಿ ಮಾಡುತ್ತ ಬಂದಿದೆ. ಒತ್ತಡಕ್ಕೆ ಜಗ್ಗದೆ, ಪ್ರಭಾವಕ್ಕೆ ಮಣಿಯದೆ ಓದುಗರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ನಿಪ್ಷಕ್ಷಪಾತವಾಗಿ ಕೆಲಸ ಮಾಡುತ್ತಿದೆ.

ಪತ್ರಿಕೆಯು ಚಿತ್ರರಂಗದ ಏಳುಬೀಳುಗಳನ್ನು ಹತ್ತಿರದಿಂದ ಗಮನಿಸಿದೆ. ತಪ್ಪು ಹಾದಿ ಹಿಡಿದಾಗ ಎಚ್ಚರಿಕೆಯ ಕಿವಿಮಾತು ಹೇಳಿದೆ. ಗೆದ್ದು ನಲಿದಾಗ ಭೇಷ್ ಎಂದು ಬೆನ್ನು ತಟ್ಟಿದೆ.
ಈ ಅವಧಿಯಲ್ಲಿ ಪತ್ರಿಕೆಯು ಗಮನಿಸಿದ ಅತ್ಯಂತ ಕಳವಳಕಾರಿ ಅಂಶವೆಂದರೆ ಸಿನಿಮಾಗಳ ಸೋಲಿನ ಸಂಖ್ಯೆಯಲ್ಲಿ ಹೆಚ್ಚಳ ಆಗುತ್ತಿರುವುದು. ಇದಕ್ಕೆ ಕಾರಣ ಅನನುಭವಿ ನಿರ್ಮಾಪಕ, ನಿರ್ದೇಶಕರ ಪ್ರವೇಶ. ಚಿತ್ರರಂಗಕ್ಕೆ ಹೊಸಬರು ಬರಬೇಕು ನಿಜ.

ಆದರೆ ಬರುವ ಮುನ್ನ ಸಿನಿಮಾದ ಮೂಲ ಆಶಯವನ್ನು ಅರಿತುಕೊಂಡಿರಬೇಕು. ಯಾವುದೋ ಭ್ರಮೆ ಅಥವಾ ಕೆಟ್ಟ ಕುತೂಹಲದಿಂದ ಸಿನಿಮಾ ಮಾಡುವವರಿಂದ ಇಡೀ ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಆಗುತ್ತದೆ. ಪ್ರತಿ ವರ್ಷ ಚಿತ್ರರಂಗಕ್ಕೆ ಶೇ. 70ರಷ್ಟು ನವನಟನಟಿಯರು, ನಿರ್ಮಾಪಕ, ನಿರ್ದೇಶಕರ ಪ್ರವೇಶ ಆಗುತ್ತದೆ. ಈ ಪೈಕಿ ಗಟ್ಟಿಯಾಗಿ ಉಳಿಯುವವರ ಸಂಖ್ಯೆ ನಗಣ್ಯ. ಇದು ಸಕಾರಾತ್ಮಕ ಸೂಚನೆಯಂತೂ ಅಲ್ಲ.

ತಂತ್ರಜ್ಞಾನ ಮುಂದುವರಿದಿರುವ ಈ ದಿನಗಳಲ್ಲಿ ಒಂದು ಸ್ಮಾರ್ಟ್‍ಫೋನ್‍ನಲ್ಲಿ ಸಿನಿಮಾಪ್ರಿಯರು ತಮಗಿಷ್ಟವಾದ ಚಿತ್ರವನ್ನು ವೀಕ್ಷಿಸಬಹುದು. ಇಂಥಹವರು ಚಿತ್ರಮಂದಿರಗಳಿಗೆ ಬರುತ್ತಿಲ್ಲ. ಉತ್ತಮ ಕಥೆ, ಶ್ರೇಷ್ಠ ನಿರೂಪಣೆಯಿಂದ ಕೂಡಿದ ಚಿತ್ರಗಳು ಮಾತ್ರ ಜನರನ್ನು ಥಿಯೇಟರ್ ಕಡೆ ಸೆಳೆಯಬಲ್ಲವು. 2019ರಲ್ಲಿ ಇಂಥಹ ಎಷ್ಟು ಸಿನಿಮಾಗಳು ಬಂದಿವೆ ಎಂಬ ಪ್ರಶ್ನೆಗೆ ಅತ್ಯಂತ ಆಘಾತಕಾರಿ ಉತ್ತರ ಸಿಗುತ್ತದೆ.

ಒಂದೇ ವಾರ 42 ಸಿನಿಮಾ ತೆರೆಕಂಡ ಕುಖ್ಯಾತಿ ಕಳೆದ ವರ್ಷಕ್ಕೆ ಸಂದಿದೆ. ಇವುಗಳ ಪೈಕಿ ಶೇ.95ರಷ್ಟು ಸಿನಿಮಾಗಳು ತರಗೆಲೆಗಳಂತೆ ಉದುರಿ ಹೋದವು. ಇಂಥಹ ಸಿನಿಮಾಗಳು, ಇಂಥಹ ಮೇಲಾಟದಿಂದ ಸಿಕ್ಕಿದ ಫಲವಾದರೂ ಏನು? ಡಬಿಂಗ್ ಸಿನಿಮಾಗಳ ದಿಡ್ಡಿಬಾಗಿಲು ತೆರೆದುಕೊಂಡಿದ್ದು ಕನ್ನಡಕ್ಕೆ ಡಬ್ ಆದ ಹಲವು ಸ್ಟಾರ್ ಫಿಲಂಗಳು ಬಂದವು. ಅವುಗಳ ಫಲಿತಾಂಶ ಕೂಡ ಶೂನ್ಯ.

ನಮಗೆ ಸ್ಟಾರ್ ಬೇಡ, ಒಳ್ಳೇ ಕಥೆ ಇರುವ ಸಿನಿಮಾ ಕೊಡಿ ಎಂದು ಪ್ರೇಕ್ಷಕ ಕೇಳುತ್ತಾನೆ. ಪ್ಯಾನ್ ಇಂಡಿಯಾ ಫಿಲಂ ಎಂಬ ಬಿಸಿಲುಗುದುರೆಯ ಬೆನ್ನು ಹತ್ತುವುದರಿಂದ ಚಿಕ್ಕಾಸಿನ ಪ್ರಯೋಜನವೂ ಇಲ್ಲ. ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ, ಚಲನಚಿತ್ರ ಅಕಾಡೆಮಿ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ ಮುಂತಾದ ಸಂಘಟನೆಗಳು ಮೂಕಪ್ರೇಕ್ಷಕರ ಹಾಗೆ ಕೈಚೆಲ್ಲಿ ಕೂರಬಾರದು. ಅನನುಭವಿಗಳ ಸಲಹೆ ಪಡೆದು ಮಾರ್ಗದರ್ಶನ ನೀಡಬೇಕು. ಅದು ಇಂದಿನ ಅಗತ್ಯ. ಇದು ಪತ್ರಿಕೆಯು ವಿನಯಪೂರ್ವಕವಾಗಿ ದಾಖಲಿಸುತ್ತಿರುವ ಸಂಗತಿ.

ಸಕಾರಾತ್ಮಕತೆಗೆ ಸೈ ಅನ್ನುತ್ತ ಬಂದಿರುವ ಅರಗಿಣಿಯನ್ನ ಓದುಗರು ಕೈಬಿಟ್ಟಿಲ್ಲ . ಅವರಿಗೆ ಚಿರಋಣಿ. ಏಜೆಂಟ್ ಬಂಧುಗಳು, ಪತ್ರಿಕೆಯನ್ನು ಮನೆ ಮನೆಗೆ ತಲುಪಿಸುವವರು, ಜಾಹೀರಾತುದಾರರು, ಚಿತ್ರೋದ್ಯಮಿಗಳು ಹಾಗೂ ಸಮಸ್ತ ಹಿತೈಷಿಗಳಿಗೂ ಧನ್ಯವಾದ ಅರ್ಪಿಸುತ್ತ ಪತ್ರಿಕೆಯು ಮುಂದೆಯೂ ಕೂಡ ಇದೇ ರೀತಿಯ ಪ್ರೀತಿ, ಬೆಂಬಲವನ್ನು ಕೋರುತ್ತದೆ.
-ಸಂಪಾದಕ

Facebook Comments