ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆರೋಗ್ಯದಲ್ಲಿ ಚೇತರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಫೆ.27- ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಆರೋಗ್ಯ ಸುಧಾರಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ನಗರದ ಅಪೋಲೋ ಆಸ್ಪತ್ರೆ ತಜ್ಞ ವೈದ್ಯ ಡಾ.ಆದಿತ್ಯ ಉಡುಪ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಜುನ್ ಜನ್ಯ ಅವರು ನಮ್ಮ ಆಸ್ಪತ್ರೆಗೆ ಇದೇ ಭಾನುವಾರ ಬಂದು ಹೊಟ್ಟೆ ಉರಿ ತಾಳಲಾಗುತ್ತಿಲ್ಲವೆಂದು ಔಷಧಿ ಪಡೆದಿದ್ದರು.

ಮತ್ತೆ ಸೋಮವಾರ ಆಗಮಿಸಿ ಎದೆನೋವು ಮತ್ತು ತಲೆನೋವಿದೆ ಎಂದು ಹೇಳಿದರು. ನಾವು ತಕ್ಷಣ ಅವರಿಗೆ ಇಸಿಜಿ ಮಾಡಿದೆವು. ಅದರಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ಅಂಜಿಯೋಗ್ರಾಮ್ ಮಾಡಿದೆವು. ಆಗ ಅವರ ಹೃದಯದಲ್ಲಿ ಶೇ.99ರಷ್ಟು ಬ್ಲಾಕೇಜ್ ಆಗಿರುವುದು ಗೊತ್ತಾಯಿತು ಎಂದು ವಿವರಿಸಿದರು.

ನಾವು ಕೂಡಲೇ ಅರ್ಜುನ್ ಜನ್ಯ ಮನೆಯವರನ್ನು ಕರೆಸಿ ಮಾತನಾಡಿ ತಕ್ಷಣ ಆಂಜಿಯೋಪ್ಲಾಸ್ಟಿ ಮಾಡಿದೆವು. ಈಗ ಅವರು ಆರೋಗ್ಯವಾಗಿದ್ದಾರೆ ಎಂದು ಆದಿತ್ಯ ಉಡುಪ ವಿವರಿಸಿದರು. ಅರ್ಜುನ್ ಅವರು ಆಸ್ಪತ್ರೆಗೆ ಬರುವುದು ಒಂದು ಗಂಟೆ ತಡವಾಗಿದ್ದರೂ ಕೆಟ್ಟ ಪರಿಣಾಮ ಘಟಿಸುತ್ತಿತ್ತು. ಅದೃಷ್ಟವಶಾತ್ ಅವರು ಪಾರಾಗಿದ್ದಾರೆ. ಅವರನ್ನು ಈಗ ಐಸಿಯುನಿಂದ ಸ್ಪೆಷಲ್ ವಾರ್ಡ್‍ಗೆ ವರ್ಗಾಯಿಸಿದ್ದೇವೆ, ಆರೋಗ್ಯದಿಂದಿದ್ದಾರೆ ಎಂದು ಅವರು ತಿಳಿಸಿದರು.

Facebook Comments