ಸಂಧಾನಕ್ಕೊಪ್ಪದ ಸರ್ಜಾ, ವಾಣಿಜ್ಯ ಮಂಡಳಿ ಸಭೆ ವಿಫಲ, ಕೋರ್ಟ್’ನಲ್ಲಿ #MeToo

ಈ ಸುದ್ದಿಯನ್ನು ಶೇರ್ ಮಾಡಿ

MArjun-Sarja--01

ಬೆಂಗಳೂರು. ಅ. 25 : ಚಿತ್ರ ನಟಿ ಶ್ರುತಿ ಹರಿಹರನ್ಗೆ ನ ಬಹುಭಾಷಾ ನಟ ಅರ್ಜುನ್ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ದಾರೆನ್ನಲಾದ ಆರೋಪದ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಡೆಸಿದ ಸಂಧಾನ ಸಭೆ ವಿಫಲವಾಗಿದೆ. ಇಬ್ಬರ ನಡುವಿನ ವಿವಾದವನ್ನು ಪರಿಹರಿಸಲು ಗುರುವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಹಿರಿಯರು ನಡೆಸಿದ ಸಂಧಾನ ಪ್ರಯತ್ನ ಸದ್ಯಕ್ಕೆ ಫಲ ಕೊಡಲಿಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ , ಹಿರಿಯ ನಟ ಅಂಬರೀಷ್ ನೇತೃತ್ವದಲ್ಲಿ ನಡೆದ 3 ಗಂಟೆಗಳ ಸುದೀರ್ಘ ಸಭೆಯಲ್ಲಿ ವಿವಾದಕ್ಕೆ ಯಾವುದೇ ತಾರ್ಕಿಕ ಅಂತ್ಯ ಸಿಗುವ ಸೂಚನೆ ಸಿಗಲಿಲ್ಲ. ಇಬ್ಬರು ನಟರು ತಮ್ಮ ತಮ್ಮ ಪ್ರತಿಷ್ಟೆಗೆ ಪಟ್ಡು ಹಿಡಿದ ಕಾರಣ ಸಭೆ ವಿಫಲವಾಯಿತು. ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಅವರನ್ನು ಪ್ರತ್ಯೇಕವಾಗಿ ಮಾತನಾಡಿಸಿ ಅಹವಾಲು ಕೇಳಲಾಯಿತು. ಬಳಿಕ ಇಬ್ಬರನ್ನೂ ಸಮಧಾನ ಮಾಡಿ ಕೈ ಕುಲುಕುವಂತೆ ಕೇಳಲಾಯಿತಾದರೂ ಇಬ್ಬರೂ ಈ ಸಲಹೆಗೆ ಒಪ್ಪಿಕೊಳ್ಳಲಿಲ್ಲ. ಇದರಿಂದಾಗಿ ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಂಡಿದೆ.

ಅರ್ಜುನ್ ಸರ್ಜಾ ಅವರು,ಬಹಿರಂಗ ಕ್ಷಮೆಯಾಚನೆಗೆ ಆಗ್ರಹಿಸಿದರು.ಆದರೆ ಶ್ರುತಿ ಹರಿ ಹರನ್ ಕ್ಷಮೆ ಕೇಳಲು ನಿರಾಕರಿಸಿದ್ದರಿಂದ ಸಂಧಾನ ಸಭೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಈಗ ಕಾನೂನು ಹೋರಾಟ ಮೂಲಕವೇ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವ ಸಾಧ್ಯತೆಯಿದೆ. ಒಂದೆಡೆ, ಅರ್ಜುನ್ ಸರ್ಜಾ ಅವರು ಕಾಂಪ್ರೊಮೈಸ್ ಮಾಡಿಕೊಳ್ಳಲು ಸುತಾರಾಂ ಒಪ್ಪಿಕೊಂಡಿಲ್ಲ. ಕೋರ್ಟ್ನಲ್ಲಿ ಶ್ರುತಿ ಹರಿಹರನ್ ವಿರುದ್ಧ ಹೋರಾಟ ಮಾಡಿಯೇ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.  ಇನ್ನೊಂದೆಡೆ, ಶ್ರುತಿ ಹರಿಹರನ್ ಅವರು ಕ್ಷಮೆ ಕೇಳಲು ಸ್ಪಷ್ಟವಾಗಿ ನಿರಾಕರಿಸಿದರು. ನಾಳೆ ಫಿಲಂ ಚೇಂಬರ್ನಲ್ಲಿ ನಡೆಯುವ ಮತ್ತೊಂದು ಸಭೆಯಲ್ಲಿ ಅಂತಿಮ ನಿರ್ಧಾರ ಬರುವವರೆಗೂ ಕಾಯುತ್ತೇನೆ ಎಂದೂ ಶ್ರುತಿ ತಿಳಿಸಿದರು.

# ಅಂಬಿ ಹೇಳಿದ್ದೇನು..?
ಸಭೆಯ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಂಬರೀಷ್, ಈ ಪ್ರಕರಣ ಕೋರ್ಟ್ನಲ್ಲಿರುವುದರಿಂದ ತಾವು ಹೆಚ್ಚೇನೂ ಮಾಡಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಾವು ಯಾರ ಪರವಾಗಿಯೂ ಇಲ್ಲ. ಹೆಣ್ಣು ಮಗಳು ಆರೋಪ ಮಾಡಿರುವ ಕಾರಣಕ್ಕೆ ಸಭೆ ನಡೆಸುತ್ತಿದ್ದೇವೆ. ಸಮಸ್ಯೆ ಬಂದಾಗ ಕೂತು ಮಾತನಾಡುವ ಮೂಲಕ ಬಗೆಹರಿಕೊಳ್ಳಬೇಕು’ ಎಂದಿದ್ದಾರೆ. ನಾನೇನೂ ಸುಪ್ರೀಂಕೋರ್ಟ್ ಜಡ್ಜ್ ಅಲ್ಲ. ಅಂಬಿ ನಿಂಗೆ ವಯಸ್ಸಾಯ್ತೋ ಎಂದು ಪರಿಗಣಿಸಿ, ಸಭೆಗೆ ನನ್ನನ್ನು ಕರೆದಿದ್ರು. ಅದರಂತೆ ನಾವೆಲ್ಲ ಹಿರಿಯರು ಸೇರಿ ಇಬ್ಬರನ್ನೂ ಮಾತನಾಡಿಸಿದೆವು. ಇಬ್ಬರಿಗೂ ತಮ್ಮ ತಮ್ಮ ಅಭಿಪ್ರಾಯ ತಿಳಿಸಲು ಸೂಚಿಸಿದ್ದೆವು. ಇಬ್ಬರೂ ತಮ್ಮ ದುಃಖ, ಅನ್ಯಾಯಗಳನ್ನು ಹೇಳಿಕೊಂಡಿದ್ದಾರೆ ಎಂದು ಹೇಳಿದರು.

ಪ್ರಕರಣ ಈಗಾಗಲೇ ಕೋರ್ಟ್ನಲ್ಲಿರುವುದರಿಂದ ನಾವು ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಇದೇ ಮೊದಲ ಬಾರಿಗೆ ಕಲಾವಿದ್ರು ಕೋರ್ಟ್ಗೆ ಹೋಗಿರುವುದು. ಇಲ್ಲೇ ನೇರವಾಗಿ ಬಂದಿದ್ದರೆ ನಾನೇ ಬಗೆಹರಿಸಿ ಬಿಡುತ್ತಿದ್ದೆ ಎಂದು ಅಂಬಿ ಸೂಚ್ಯವಾಗಿ ಹೇಳಿದರು. ಈ ಹಿಂದೆಲ್ಲಾ ಅಂಬಿ ಮಾತುಕತೆಗೆ ಮುಂದಾದರೆ ಏನಾದರೂ ಫೈನಲ್ ಆಗುತ್ತಿತ್ತು. ಈಗ ನೀವು ಇಬ್ಬರ ವಾದ-ಪ್ರತಿವಾದವನ್ನು ಕೇಳಿದ್ದೀರಿ, ಪ್ರಕರಣದಲ್ಲಿ ನಿಮ್ಮ ತೀರ್ಪು ಏನು ಎಂದು ಕೇಳಿದ್ದಕ್ಕೆ, ‘ಅದನ್ನು’ ನಾನು ಕಣ್ಣಾರೆ ಕಂಡಿಲ್ಲ. ಹಾಗಾಗಿ ನಾನು ಯಾವುದೇ ತೀರ್ಮಾನಕ್ಕೆ ಬರಲಾರೆ ಎಂದು ಸ್ಪಷ್ಟಪಡಿಸಿದರು.

# ಸಂಧಾನಕ್ಕೆ ಒಪ್ಪದ ಅರ್ಜುನ್ ಸರ್ಜಾ :
ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಅನ್ನೋದು ಇಲ್ಲವೇ ಇಲ್ಲ ಎಂದು ಬಹುಭಾಷಾ ನಟ ಅರ್ಜುನ್ ಸರ್ಜಾ ಕಡ್ಡಿ ಮುರಿದಂತೆ ಹೇಳಿದರು. ‘ಕನ್ನಡದ ಜನತೆಗೆ ನನ್ನ ಹೃದಯಪೂರ್ವಕವಾದ ಧನ್ಯವಾದಗಳು. ನಾನು ಈ ಸನ್ನಿವೇಶದಲ್ಲಿ ಮಾತನಾಡುತ್ತಿರುವುದು ವಿಷಾದಕರ. ಆರೋಪದಿಂದ ನನಗೆ ತುಂಬಾ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ನನಗೆ ಆ ನೋವು ಹೇಳಲು ಸಾಧ್ಯವಾಗಲ್ಲ. ಪ್ರತಿ ಕಲಾವಿದರಿಗೂ ವಾಣಿಜ್ಯ ಮಂಡಳಿ ತಾಯಿಯಿದ್ದಂತೆ. ಈ ನನ್ನ ಸಮಸ್ಯೆಯನ್ನ ವಿಚಾರಣೆ ಮಾಡಲು ನನ್ನನ್ನ ಕರೆದರು. ಅವರ ಮೇಲೆ ಅಪಾರವಾದ ನಂಬಿಕೆ ಗೌರವವಿದೆ. 38 ವರ್ಷಗಳಿಂದಲೂ ಹಾಗೆಯೇ ಇದೆ. ಅದಕ್ಕೆ ಇಲ್ಲಿಗೆ ಬಂದೆ. ನನ್ನ ಮನಸ್ಸಿನ ನೋವನ್ನ ನಾನು ತೋಡಿಕೊಂಡೆ. ಚಿತ್ರರಂಗ ಚೆನ್ನಾಗಿರುವುದೇ ದೊಡ್ಡವರ ಅಭಿಪ್ರಾಯವಾಗಿರುತ್ತದೆ.

ಇವರ ಮೇಲಿನ ಗೌರವದಿಂದ ನಾನು ಇಲ್ಲಿಗೆ ಬಂದೆ. ನನ್ನ ನೋವು ನನೊಬ್ಬನ ನೋವಲ್ಲ. ಇದರಿಂದ ನನ್ನ ಕುಟುಂಬಕ್ಕೆ ನೋವಾಗಿದೆ. ಅಭಿಮಾನಿಗಳಿಗೆ ನೋವಾಗಿದೆ. ತಮಿಳುನಾಡು, ಆಂಧ್ರ, ಕೇರಳದಲ್ಲಿರುವ ಅಭಿಮಾನಿಗಳಿಗೂ ನೋವಾಗಿದೆ. ಇಷ್ಟು ರಾಜ್ಯಗಳಲ್ಲಿ ನನ್ನ ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ. ಅದು ಏಕೆ ಅಂತಾ ನನಗೆ ಗೊತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ‘ಅಮಾಯಕರು ಬಲಿಯಾಗಬಾರದು. ಕಾಲವೇ ನ್ಯಾಯ ಹೇಳುತ್ತೆ. ಇದರ ಹಿಂದೆ ಯಾರಿದ್ದಾರೆ ಎಂದು ನಿಮಗೆ ತಿಳಿಯುತ್ತೆ. ನಾನ್ ಮಾಡಿದ್ರೆ ನನಗೆ, ಅವರು ಮಾಡಿದ್ರೆ ಅವರಿಗೆ ಶಿಕ್ಷೆಯಾಗುತ್ತೆ. ಕಾಂಪ್ರಮೈಸ್ ಮಾಡಿದ್ರೆ ನನ್ನ ತಪ್ಪಾಗುತ್ತೆ. ಇದಕ್ಕಾಗಿ ಮನವಿ ಮಾಡಿ ಕಾಂಪ್ರಮೈಸ್ ಮಾಡ್ಬೇಡಿ’ ಎಂದು ಕೇಳಿಕೊಂಡೆ ಎಂದರು.

‘ಮೀ-ಟೂ ಅನ್ನೋದು ಉತ್ತಮ ಅಭಿಯಾನ. ಹೆಣ್ಣು ಅನ್ಯಾಯ ಹೇಳಿಕೊಳ್ಳುವ ವೇದಿಕೆಯಿದು. ಈ ವೇದಿಕೆಯನ್ನ ದುರುಪಯೋಗಪಡಿಸಿಕೊಳ್ಳಬಾರದು. ಎಷ್ಟೋ ಅನಾಥ ಮಕ್ಕಳಿಗೂ ಅನ್ಯಾಯ ನಡೆಯುತ್ತಿದೆ. ಸಿನಿಮಾದಲ್ಲಿ ನನ್ನನ್ನ ಹಿಡಿದುಕೊಂಡ್ರೆ. ಊಟಕ್ಕೆ ಕರೆದ್ರು ಅನ್ನೋ ಕಾರಣಕ್ಕೆ ಈ ಆರೋಪ ಮಾಡಿದ್ರೆ ಈ ವೇದಿಕೆ ಸರಿ ಹೋಗಲ್ಲ. ನನ್ನನ್ನ ಕರೆದಿದ್ರೆ ನಾನು ಬರುತ್ತಿದೆ ಎಂದು ಹೇಳಿದರು. ಅರ್ಜುನ್ ಸರ್ಜಾ, ಶ್ರುತಿ ವಿರುದ್ಧ ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಚೆನ್ನೈ ಕೋರ್ಟ್ಗಳಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಸದ್ಯ ಕಲಾವಿದರ ಸಂಘದವರು, ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ಹಿರಿಯರ ನಟರು, ಶ್ರುತಿ, ಕವಿತಾ ಲಂಕೇಶ್, ಪದ್ಮಾವಾಸಂತಿ, ರಾಕ್ಲೈನ್ ವೆಂಕಟೇಶ್, ರಾಜೇಂದ್ರ ಸಿಂಗ್ ಬಾಬು, ರೂಪಾ ಅಯ್ಯರ್, ಲೋಕನಾಥ್, ಭಾ.ಮಾ. ಹರೀಶ್, ದೊಡ್ಡಣ್ಣ ಸಭೆಯಲ್ಲಿ ಭಾಗವಹಿಸಿದ್ದರು.

# ನಾನ್ಯಾಕೆ ಕ್ಷಮೆ ಯಾಚಿಸಲಿ: ಶೃತಿ ಹರಿಹರನ್
ಕನ್ನಡ ಚಿತ್ರರಂಗದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದ್ದ ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ನಡುವಿನ ‘ಮೀ ಟೂ’ ಪ್ರಕರಣ ಬಗೆಹರಿಸಲು ಹಿರಿಯ ನಟ ಅಂಬರೀಶ್ ಅವರ ನೇತೃತ್ವದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆಸಲಾದ ಸಭೆ ವಿಫಲಗೊಂಡಿದೆ. ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ಪರಸ್ಪರ ತಮ್ಮ ನಿಲುವಿಗೆ ಬದ್ಧವಾದ ಕಾರಣ ಹಾಗೂ ಪ್ರಕರಣ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಅಲ್ಲಿಯೇ ಇತ್ಯರ್ಥ ಪಡಿಸಿಕೊಳ್ಳುವಂತೆ ಚಿತ್ರರಂಗದ ಹಿರಿಯರು ತಿಳಿಸಿದ್ದಾರೆ.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಟಿ ಶ್ರುತಿ ಹರಿಹರನ್, ತೊಂದರೆಗೊಳಗಾಗಿದ್ದು ನಾನು. ನಾನ್ಯಾಕೆ ಕ್ಷಮೆಯಾಚಿಸಲಿ ಎಂದು ಹೇಳಿದ್ದಾರಲ್ಲದೆ, ಚಿತ್ರರಂಗದ ಹಿರಿಯರ ಮಾತಿನಂತೆ ನನ್ನ ದೂರನ್ನು ತಡೆ ಹಿಡಿದಿದ್ದೇನೆ. ನಾಳೆ ಬೆಳಗ್ಗೆ ಅಂಬರೀಶ್ ಅವರ ಸೂಚನೆವರೆಗೂ ಕಾಯುತ್ತೇನೆ. ಬಳಿಕ ನನ್ನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.

Facebook Comments