ಕಾಶ್ಮೀರದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು, ಅ.30- ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಪಾಕಿಸ್ತಾನ ಪ್ರೇರಿತ ಉಗ್ರಗಾಮಿಗಳು ನಿರಂತರ ಯತ್ನ ನಡೆಸುತ್ತಿರುವಾಗಲೇ ಅವರನ್ನು ನಿಗ್ರಹಿಸುವ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ತೀವ್ರಗೊಳಿಸಿವೆ.  ಕಣಿವೆ ಪ್ರಾಂತ್ಯ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭಯೋತ್ಪಾದಕರ ಅಡಗುದಾಣ ವೊಂದರನ್ನು ಪತ್ತೆ ಮಾಡಿರುವ ಭದ್ರತಾ ಪಡೆಗಳು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಇದರಿಂದಾಗಿ ಮುಂದೆ ನಡೆಯಬಹುದಾಗಿದ್ದ ಉಗ್ರರ ವಿಧ್ವಂಸಕ ಕೃತ್ಯಗಳು ತಪ್ಪಿದಂತಾಗಿದೆ. ಇದು ಎರಡು ದಿನಗಳಲ್ಲಿ ಪತ್ತೆಯಾದ ಭಯೋತ್ಪಾದಕರ ಎರಡನೇ ರಹಸ್ಯ ತಾಣವಾಗಿದೆ. ರಜೌರಿ ಜಿಲ್ಲೆಯ ಗಂಭೀರ ಮುಘಲನ್ ಪ್ರದೇಶದ ದಟ್ಟ ಅರಣ್ಯದಲ್ಲಿ ಕಾಶ್ಮೀರ ಪೊಲೀಸರು ಮತ್ತು 38ನೇ ರಾಷ್ಟ್ರೀಯ ರೈಫಲ್ಸ್ ಯೋಧರು ಆತಂಕವಾದಿಗಳ ಅಡಗುದಾಣವನ್ನು ಪತ್ತೆ ಮಾಡಿದ್ದಾರೆ.

ಈ ಸ್ಥಳದಿಂದ ಎಕೆ-47, ಎಕೆ-56 ರೈಫಲ್‍ಗಳು, ಸ್ವಯಂ ಚಾಲಿತ ಬಂದೂಕುಗಳು, ಪಿಸ್ತೂಲ್‍ಗಳು, ಬುಲೆಟ್‍ಗಳು, ಸೋಟಕಗಳು, ಡಿಟೋನೇಟರ್‍ಗಳು. ಆರು ಕೆಜಿ ಸ್ಪೋಟಕ ವಸ್ತುಗಳು ಸೇರಿದಂತೆ ಚೀನಾ ತಯಾರಿಕೆಯ ಇತರ ಶಸ್ತ್ರಾಸ್ರ್ತಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಜೌರಿ ಪೊಲೀಸ್ ವರಿಷ್ಠಾಕಾರಿ ಚಂದನ್ ಕೊಹ್ಲಿ ತಿಳಿಸಿದ್ಧಾರೆ.

ಮೊನ್ನೆ ಪೂಂಚ್ ಜಿಲ್ಲೆಯೆ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ಅಡಗುದಾಣವೊಂದನ್ನು ಪತ್ತೆ ಮಾಡಿರುವ ಪೊಲೀಸರು ಮತ್ತು ಯೋಧರು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು.

ಈ ಕಾರ್ಯಾಚರಣೆಯಿಂದಾಗಿ ಕಣಿವೆಯಲ್ಲಿ ನಡೆಯಬಹುದಾಗಿದ್ದ ಉಗ್ರಗಾಮಿಗಳ ದಾಳಿ ತಪ್ಪಿದಂತಾಗಿತ್ತು.  ಪೂಂಚ್ ಜಿಲ್ಲೆಯ ಮೆಂಧಾಲ್ ಸೆಕ್ಟರ್‍ನ ಕಾಲಬನಿ ಅರಣ್ಯದಲ್ಲಿ ಆತಂಕವಾದಿಗಳ ರಹಸ್ಯ ಅಡುಗುದಾಣವನ್ನು ಕಾಶ್ಮೀರ ಪೊಲೀಸರು ಮತ್ತು ರಾಷ್ಟ್ರೀಯ ರೈಫಲ್ಸ್ ಯೋಧರು ಪತ್ತೆ ಮಾಡಿದ್ದರು.

ಈ ಸ್ಥಳದಲ್ಲಿ ಬಚ್ಚಿಡಲಾಗಿದ್ದ ಎಕೆ-47, ಎಕೆ-56 ರೈಫಲ್‍ಗಳು, ಪಿಸ್ತೂಲ್‍ಗಳು, ಬುಲೆಟ್‍ಗಳು, ಸೋಟಕಗಳು, ರೆಡಿಯೋ ಸೆಟ್‍ಗಳು, ಸೋಲಾರ್ ಚಾರ್ಜರ್ ಮತ್ತಿತ್ತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೂಂಚ್ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ರಮೇಶ್ ಅಂಗ್ರಲ್ ತಿಳಿಸಿದ್ಧಾರೆ.

Facebook Comments