ಭಯೋತ್ಪಾದಕರು-ಸೇನೆ ನಡುವೆ ಭೀಕರ ಗುಂಡಿನ ಚಕಮಕಿ : ಕರ್ನಲ್, ಮೇಜರ್ ಸೇರಿ 5 ಯೋಧರು ಹುತಾತ್ಮ..!

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಮೇ 3-ಕೊರೊನಾ ಲಾಕ್‍ಡೌನ್ ಪರಿಸ್ಥಿತಿಯ ಲಾಭ ಪಡೆದು ಕಾಶ್ಮೀರದಲ್ಲಿ ಭಾರೀ ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿದ್ದ ಪಾಕಿಸ್ತಾನಿ ಬೆಂಬಲಿತ ಉಗ್ರಗಾಮಿಗಳ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರ ನಿಗ್ರಹ ಮಹತ್ವದ ಕಾರ್ಯಾಚರಣೆಯಲ್ಲಿ ಸೇನಾ ಕರ್ನಲ್, ಮೇಜರ್ ಸೇರಿ ಭದ್ರತಾ ಪಡೆಯ ಐವರು ಯೋಧರು ಹುತಾತ್ಮರಾಗಿದ್ದಾರೆ. ಭೀಕರ ಎನ್‍ಕೌಂಟರ್‍ನಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.

ಉತ್ತರ ಕಾಶ್ಮೀರದ ಹಂಡ್ವಾರದ ಗ್ರಾಮದಲ್ಲಿ ಇಂದು ನಸುಕಿನಲ್ಲಿ ಉಗ್ರರೊಂದಿಗೆ ನಡೆದ ಭಾರೀ ಗುಂಡಿನ ಕಾಳಗದಲ್ಲಿ ಸೇನಾಧಿಕಾರಿಗಳಾದ ಕರ್ನಲ್ ಅಶುತೋಷ್ ಶರ್ಮ ಮತ್ತು ಮೇಜರ್ ಅನುಜ್ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯ ಸಬ್ ಇನ್ಸ್‍ಪೆಕ್ಟರ್ ಶಕೀಲ್ ಖಾಜಿ ಹುತಾತ್ಮರಾಗಿದ್ದಾರೆ. ಅಲ್ಲದೇ ಇನ್ನಿಬ್ಬರು ಯೋಧರೂ ಕೂಡ ಉಗ್ರಗಾಮಿ ನಿಗ್ರಹ ಕಾರ್ಯಾಚರಣೆಯಲ್ಲಿ ಪ್ರಾಣಾರ್ಪಣೆ ಮಾಡಿದ್ದಾರೆ.

ಘಟನೆ ವಿವರ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂಡ್ವಾರ ಪ್ರದೇಶದ ಚಾಂಜ್‍ಮುಲ್ಲಾದ ಮನೆಯೊಂದರಲ್ಲಿ ಉಗ್ರಗಾಮಿಗಳು ಅಡಗಿ ಕೆಲವು ಗ್ರಾಮಸ್ಥರನ್ನು ಒತ್ತೆಯಾಗಿಟ್ಟುಕೊಂಡಿದ್ಧಾರೆ ಎಂಬ ಖಚಿತ ವರ್ತಮಾನ ಸೇನಾ ಪಡೆಗೆ ಲಭಿಸಿತು. ಕರ್ನಲ್ ಅಶುಶೋಷ್ ಶರ್ಮ ನೇತೃತ್ವದ ತಂಡವು ಆತಂಕವಾದಿಗಳನ್ನು ಸದೆಬಡಿದು ಜನರನ್ನು ಉಗ್ರರ ಬಿಗಿಮುಷ್ಟಿಯಿಂದ ಪಾರು ಮಾಡಲು ಕಾರ್ಯಾಚರಣೆಗೆ ಇಳಿಯಿತು.

ಒತ್ತೆಯಾಳುಗಳನ್ನು ಭಯೋತ್ಪಾದಕರ ಹಿಡಿತದಿಂದ ಪಾರು ಮಾಡುವಲ್ಲಿ ಯಶಸ್ವಿಯಾದ ತಂಡವು ಉಗ್ರರನ್ನು ಹೊಡೆದುರುಳಿಸಲು ಮುಂದಾಯಿತು. ಇದೇ ಸಂದರ್ಭದಲ್ಲಿ ಉಗ್ರರು ಸೇನಾ ತಂಡದ ಮೇಲೆ ಗುಂಡಿನ ದಾಳಿ ನಡೆಸಿದಾಗ ಯೋಧರು ಪ್ರತಿದಾಳಿ ನಡೆಸಿದರು. ಆಗ ಬೀಕರ ಗುಂಡಿನ ಚಕಮಕಿ ನಡೆಯಿತು ಎಂದು ಉನ್ನತ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಎನ್‍ಕೌಂಟರ್‍ನಲ್ಲಿ ಕರ್ನಲ್ ಶರ್ಮ, ಮೇಜರ್ ಅನುಜ್, ಸಬ್ ಇನ್ಸ್‍ಪೆಕ್ಟರ್ ಶಕೀಲ್, ಲಾನ್ಸ್ ನಾಯಕ್ ಮತ್ತು ರೈಫಲ್ ಮ್ಯಾನ್ ಹುತಾತ್ಮರಾದರು. ಈ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಹತರಾದ ಆತಂಕವಾದಿಗಳಿಂದ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಲಾಕ್‍ಡೌನ್ ಜಾರಿಗೆ ಬಂದ ಮಾರ್ಚ್ 25ರಿಂದ ಇಂದಿನವರೆಗೆ ಯೋಧರು 30 ಉಗ್ರರನ್ನು ಹೊಡೆದುರುಳಿಸಿದ್ದಾರೆ. ಲಾಕ್‍ಡೌನ್ ಪರಿಸ್ಥಿತಿಯ ದುರ್ಲಾಭ ಪಡೆದು ಕಾಶ್ಮೀರ ಕಣಿವೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ನಿರಂತರವಾಗಿ ಯತ್ನಿಸುತ್ತಿರುವ ಪಾಕಿಸ್ತಾನ ಪ್ರೇರಿತ ಉಗ್ರಗಾಮಿಗಳ ಕುತಂತ್ರವನ್ನು ಭಾರತೀಯ ಭದ್ರತಾ ಪಡೆಗಳು ವಿಫಲಗೊಳಿಸುತ್ತಲೇ ಇವೆ.

ಕಣಿವೆ ಪ್ರಾಂತ್ಯದಲ್ಲಿ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ಭಾರೀ ಕಾರ್ಯಾಚರಣೆ ಮುಂದುವರಿಸಿದೆ. ಏಪ್ರಿಲ್‍ನಲ್ಲೇ 28 ಉಗ್ರರನ್ನು ಯೋಧರು ಹೊಡೆದುರುಳಿಸಿದ್ದಾರೆ.

ಏತನ್ಮಧ್ಯೆ, ಮೇ 11ರಂದು ಭಾರೀ ವಿಧ್ವಂಸಕ ಕೃತ್ಯ ಎಸಗಲು ಈಗಾಗಲೇ ಭಾರತ-ಪಾಕ್ ಗಡಿ ಪ್ರದೇಶ ಮತ್ತು ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳ ಒಳನುಸುಳಲು ಸುಮಾರು 30 ಶಸ್ತ್ರಸಜ್ಜಿತ ಉಗ್ರರು ಸಜ್ಜಾಗಿದ್ದಾರೆ ಎಂಬ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

Facebook Comments

Sri Raghav

Admin