ಭಾರತದೊಳಗೆ ನುಸುಳಲು ಉಗ್ರರ ಯತ್ನ, ಭಾರೀ ಗುಂಡಿನ ಚಕಮಕಿಯಲ್ಲಿ ಯೋಧರು ಹುತಾತ್ಮ

ಈ ಸುದ್ದಿಯನ್ನು ಶೇರ್ ಮಾಡಿ

Military

ಶ್ರೀನಗರ, ಆ.7-ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾ ದಕರ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದೆ. ಉತ್ತರ ಕಾಶ್ಮೀರದ ಗುರೇಜ್ ಸೆಕ್ಟರ್‍ನಲ್ಲಿ ಉಗ್ರರ ನುಸುಳುವಿಕೆ ವಿರುದ್ದ ನಡೆದ ಕಾರ್ಯಾಚರಣೆ ವೇಳೆ ಸೇನಾ ಮೇಜರ್ ಸೇರಿದಂತೆ ನಾಲ್ವರು ಯೋಧರು ಪ್ರಾರ್ಣಾಪಣೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ನಾಲ್ವರು ಉಗ್ರಗಾಮಿಗಳನ್ನು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದಾರೆ.

ಸ್ವಾತಂತ್ರ್ಯೋತ್ಸವ ವೇಳೆ ಕಾಶ್ಮೀರ, ದೆಹಲಿ ಸೇರಿದಂತೆ ವಿವಿಧೆಡೆ ವಿಧ್ವಂಸಕ ಕೃತ್ಯಗಳನ್ನು ಎಸಗಲು ಪಾಕಿಸ್ತಾನ ಕೃಪಾಪೋಷಿತ ಉಗ್ರರು ಸಜ್ಞಾಗಿದ್ದಾರೆ ಎಂಬ ಗುಪ್ತಚರ ಮಾಹಿತಿಗಳ ಬೆನ್ನಲ್ಲೇ ಕಳೆದ ಕೆಲವು ದಿನಗಳಿಂದ ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರ ಚಟುವಟಿಕೆಗಳು ತೀವ್ರಗೊಂಡಿದೆ.  ಕಾಶ್ಮೀರ ಬಂಡಿಪೋರಾ ಜಿಲ್ಲೆಯ ಗುರೇಜ್ ವಲಯದಲ್ಲಿನ ಗೋವಿಂದ್ ನಲ್ಲಾ ಪ್ರದೇಶದಲ್ಲಿ ಯೋಧರು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಮೇಜರ್ ಕೆ.ಪಿ.ರಾಣೆ, ಹವಲ್ದಾರ್‍ಗಳಾದ ಜ್ಯಾಮೀ ಸಿಂಗ್ ಮತ್ತು ವಿಕ್ರಮ್‍ಜೀತ್ ಹಾಗೂ ರೈಫಲ್‍ಮ್ಯಾನ್ ಮಂದೀಪ್ ಹುತಾತ್ಮರಾದರು ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ವೇಳೆ ಯೋಧರು ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಹತರಾದ ಉಗ್ರರಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ನಕ್ಷೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.  ಈ ಪ್ರದೇಶದಲ್ಲಿ ಒಟ್ಟು ಎಂಟು ಉಗ್ರರು ಗಡಿ ನಿಯಂತ್ರಣ ರೇಖೆ ಮೂಲಕ ಕಾಶ್ಮೀರದೊಳಗೆ ನುಸುಳಲು ಯತ್ನಿಸಿದರು. ಇದೇ ವೇಳೆ ಗಸ್ತಿನಲ್ಲಿದ್ದ ಸೇನಾಪಡೆ ಭಯೋತ್ಪಾದಕರನ್ನು ಗಮನಿಸಿದಾಗ ಗುಂಡಿನ ಚಕಮಕಿ ನಡೆಯಿತು. ಉಗ್ರರ ದಾಳಿಯಲ್ಲಿ ಸೇನಾ ಮೇಜರ್ ಮತ್ತು ಮೂವರು ಹುತಾತ್ಮರಾದರು.

ನಾಲ್ವರು ಉಗ್ರರನ್ನು ಸೇನಾಪಡೆ ಹೊಡೆದುರುಳಿಸಿದ ನಂತರ ಉಳಿದ ನಾಲ್ವರು ಭಯೋತ್ಪಾದಕರು ತಮ್ಮ ನೆಲೆಯಾದ ಪಾಕಿಸ್ತಾನ್-ಆಕ್ರಮಿತ-ಕಾಶ್ಮೀರಕ್ಕೆ (ಪಿಒಕೆ) ಪರಾರಿಯಾದರು. ಈ ಪ್ರದೇಶದಲ್ಲಿ ಅಡಗಿರಬಹುದಾದ ಉಗ್ರಗಾಮಿಗಳಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.  ಕಾಶ್ಮೀರ ಕಣಿವೆಯಲ್ಲಿ ಆಗಸ್ಟ್ 15ಕ್ಕೆ ಮುನ್ನ ಮತ್ತು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಭಾರೀ ವಿಧ್ವಂಸಕ ಕೃತ್ಯಗಳು ನಡೆಸಲು ಉಗ್ರರು ಹುನ್ನಾರ ನಡೆಸಿದ್ದಾರೆಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಕಟ್ಟೆಚ್ಚರದೊಂದಿಗೆ ವ್ಯಾಪಕ ಬಂದೋಬಸ್ತ್ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin