ಆರೋಗ್ಯ ಮಿಷನ್ ಕಾರ್ಯಕರ್ತರ ವೇತನ ಹೆಚ್ಚಳಕ್ಕೆ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.8-ಜೀವದ ಹಂಗು ತೊರೆದು ಕೋವಿಡ್ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ರಾಷ್ಟ್ರೀಯ ಆರೋಗ್ಯ ಮಿಷನ್‍ನ ಕಾರ್ಯಕರ್ತರ ವೇತನವನ್ನು ಹೆಚ್ಚಳ ಮಾಡಬೇಕು ಎಂದು ಬಿಜೆಪಿ ಸದಸ್ಯ ಅಯನೂರು ಮಂಜುನಾಥ್ ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣ ಪ್ರಸ್ತಾವದ ಮೇಲೆ ಮುಂದುವರೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಷ್ಟ್ರೀಯ ಆರೋಗ್ಯ ಮಿಷನ್ ಕಾರ್ಯಕರ್ತರ ವೇತನ ಹೆಚ್ಚಳ ಮಾಡುವಂತೆ ನೀಡಿರುವ ವರದಿಯನ್ನು ಯಥಾವತ್ ಜಾರಿಗೆ ತರಬೇಕು. ಅಗತ್ಯವಿದ್ದರೆ ಖರ್ಚುವೆಚ್ಚದಲ್ಲಿ ಕಡಿಮೆ ಮಾಡಲಿ. ಕಡಿಮೆ ಸಂಬಳಕ್ಕೆ ಕೆಲಸ ಮಾಡುವವರ ಬಗ್ಗೆ ಈ ಸದನ ಋಣಿಯಾಗಿರಬೇಕು ಎಂದರು.

ಕೋವಿಡ್‍ನಿಂದಾಗಿ ಶಾಸಕರ ವೇತನ ಭತ್ಯೆಯಲ್ಲಿ ಶೇ.30ರಷ್ಟು ಕಡಿತವಾಯಿತು. ಆದರೆ ಸರ್ಕಾರಿ ಅಧಿಕಾರಿ ಮತ್ತು ವೇತನ ಕಡಿತವಾಗಲಿಲ್ಲ. ಸರ್ಕಾರಿ ಆದಾಯದಲ್ಲಿ ಗಣನೀಯವಾಗಿ ಕಡಿಮೆಯಾಯಿತು. ಶಿಕ್ಷಕರ ಸಮಸ್ಯೆಗಳನ್ನು ಸಹ ಸರ್ಕಾರ ಬಗೆಹರಿಸಬೇಕು. ಕೋವಿಡ್ ನಿಗ್ರಹದ ಜೊತೆಗೆ ಗುರುಗಳನ್ನು ಸಂರಕ್ಷಣೆ ಮಾಡಬೇಕೆಂಬ ಸಲಹೆಯನ್ನು ಮುಂದಿಟ್ಟರು.

ಸಚಿವರಾದವರು ಜಾತಿ ಪರವಾದ ಹೋರಾಟದಲ್ಲಿ ಸಕ್ರಿಯವಾಗುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಇಂಥ ಸಂದರ್ಭದಲ್ಲ ರಾಜ್ಯಪಾಲರು ಸೂಕ್ತ ಸೂಚನೆಯನ್ನು ನೀಡಬೇಕೆಂದು ಮನವಿ ಮಾಡಿದರು.

Facebook Comments