ಪಿಸ್ತೂಲು ತೋರಿಸಿ ಹಣ ದೋಚಿದ್ದ ಇಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.15- ಕಂಪೆನಿಗೆ ಸೇರಿದ ಹಣ ಸಂಗ್ರಹಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಪಿಸ್ತೂಲು ಮಾದರಿಯ ಲೈಟರ್ ತೋರಿಸಿ ಬೆದರಿಸಿ 79 ಸಾವಿರ ಹಣ ದೋಚಿದ್ದ ಇಬ್ಬರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ರವಿ ಮತ್ತು ರಾಜು ಬಂಧಿತ ಆರೋಪಿಗಳು. ಇವರಿಂದ 60 ಸಾವಿರ ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಪಿಸ್ತೂಲು ಮಾದರಿಯ ಲೈಟರ್ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಡಿ.2ರಂದು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಕಂಪೆನಿಗೆ ಸೇರಿದ ಹಣವನ್ನು ವ್ಯಕ್ತಿಯೊಬ್ಬರು ವಸೂಲಿ ಮಾಡಿ ಸಂಗ್ರಹಿಸಿಕೊಂಡು ಕೆಂಗೇರಿ ಉಪನಗರದಲ್ಲಿ ಮತ್ತೊಬ್ಬರಿಂದ ಹಣ ಸಂಗ್ರಹಿಸಲು ಬರುತ್ತಿದ್ದಾಗ ದರೋಡೆಕೋರ ಗನ್ ತೋರಿಸಿ ಬೆದರಿಸಿ ಅವರ ಬಳಿ ಇದ್ದ 79,920ರೂ.ಗಳನ್ನು ಕಸಿದುಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕೆಂಗೇರಿ ಠಾಣೆ ಇನ್ಸ್‍ಪೆಕ್ಟರ್ ವಸಂತ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments