ಇಬ್ಬರು ಆರೋಪಿಗಳ ಸೆರೆ : 1.39 ಕೋಟಿ ರೂ. ಮೌಲ್ಯದ ಮಾಲು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.21- ಮಾದಕ ವಸ್ತು ಮಾರಾಟ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡು ಅದರಿಂದ ಬಂದ ಹಣದಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿ 1 ಕೋಟಿ 39 ಲಕ್ಷ ಮೌಲ್ಯದ ಎಲ್‍ಎಸ್‍ಡಿ ಸ್ಟ್ರೀಪ್ಸ್‍ಗಳು ಮತ್ತು 27.50 ಲಕ್ಷ ಹಣ ವಶಪಡಿಸಿಕೊಂಡಿದ್ದಾರೆ. ಪುಣೆ ಮೂಲದ ರಾಹುಲ್ ತುಳಸಿರಾಮ್ ಶರ್ಮ (28) ಮತ್ತು ತಮಿಳುನಾಡಿನ ಶೇವಾಪೆಟ್ ನಿವಾಸಿ ಬಾಲಾಜಿ (48) ಬಂಧಿತ ಆರೋಪಿಗಳು.

ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ವ್ಯವಸ್ಥಿತವಾಗಿ ಸಂಚು ರೂಪಿಸಿ ಮಾದಕ ವಸ್ತುಗಳ ಮಾರಾಟ, ಸರಬರಾಜು ಮತ್ತು ಸೇವನೆ ಮಾಡುವ ಪ್ರಕರಣಗಳು ಅಧಿಕವಾಗಿದ್ದು, ಇದರಿಂದ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವ ಜಾಲಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಪತ್ತೆ ಮಾಡಿ ಕ್ರಮ ಜರುಗಿಸುವಂತೆ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಿದ್ದರು.

ಅದರಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಬೆಂಗಳೂರು ನಗರ ದಕ್ಷಿಣ ವಿಭಾಗದ ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯ ದಯಾನಂದ ಸಾಗರ್ ಆಸ್ಪತ್ರೆ ಬಳಿ ಮಾದಕ ವಸ್ತು ಎಲ್‍ಎಸ್‍ಡಿ ಸ್ಟ್ರೀಪ್ಸ್‍ಗಳನ್ನು ಮಾರಾಟ ಮಾಡಲು ಬಂದಿರುವ ಬಗ್ಗೆ ಮಾಹಿತಿ ಪಡೆದು ದಾಳಿ ಮಾಡಿ ಆರೋಪಿ ರಾಹುಲ್ ತುಳಸಿರಾಮ್ ಶರ್ಮ ಎಂಬಾತನನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ ಹಲವು ಮಾಹಿತಿಗಳು ಬೆಳಕಿಗೆ ಬಂದಿವೆ.

ಆರೋಪಿಯು ಮಾದಕ ವಸ್ತು ಮಾರಾಟ ಮಾಡುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಅದರಿಂದ ಬಂದ ಹಣದಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದುದು ತನಿಖೆಯಿಂದ ತಿಳಿದುಬಂದಿದೆ. ಈತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಮತ್ತೊಬ್ಬ ಆರೋಪಿ ಬಾಲಾಜಿ ಬಗ್ಗೆ ಬಾಯ್ಬಿಟ್ಟಿದ್ದಾನೆ. ಪೊಲೀಸರು ಶೋಧ ಮುಂದುವರೆಸಿ ಆರೋಪಿ ಬಾಲಾಜಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಿಂದ 1,39,65,000ಕ್ಕೂ ಹೆಚ್ಚು ಬೆಲೆಬಾಳುವ 9310 ಮಾದಕ ವಸ್ತು ಎಲ್‍ಎಸ್‍ಡಿ ಸ್ಟ್ರೀಪ್ಸ್‍ಗಳು, ಮೊಬೈಲ್ ಫೋನ್‍ಗಳು, ಲ್ಯಾಪ್‍ಟಾಪ್ ಮತ್ತು 27.50 ಲಕ್ಷ ಹಣ ವಶಪಡಿಸಿಕೊಂಡಿದ್ದಾರೆ.

ನಗರ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಹರೀಶ್ ಪಾಂಡೆ ನೇತೃತ್ವದಲ್ಲಿ ಕುಮಾರಸ್ವಾಮಿ ಲೇಔಟ್ ಠಾಣೆ ಇನ್ಸ್‍ಪೆಕ್ಟರ್ ಶಿವಕುಮಾರ್, ಕೋಣನಕುಂಟೆ ಠಾಣೆ ಇನ್ಸ್‍ಪೆಕ್ಟರ್ ನಂಜೇಗೌಡ ಮತ್ತು ಸಬ್‍ಇನ್ಸ್‍ಪೆಕ್ಟರ್‍ಗಳಾದ ಸುಬ್ರಮಣಿ, ವಿದ್ಯಾಶ್ರೀ, ನಾಗೇಶ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತಮ ಕಾರ್ಯ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್ ಹಾಗೂ ಅಪರ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಪ್ರಶಂಸಿಸಿದ್ದಾರೆ.

Facebook Comments