ಪತಿಯನ್ನೇ ಕೊಲೆ ಮಾಡಿಸಿದ್ದ ಪತ್ನಿ, ಪ್ರಿಯಕರ ಸೇರಿ 10 ಮಂದಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.25- ಪ್ರಿಯತಮೆಯೊಂದಿಗೆ ಒಳಸಂಚು ರೂಪಿಸಿ ಅಕ್ರಮ ಸಂಬಂಧಕ್ಕೆ ಅಡಚಣೆಯಾದ ಆಕೆಯ ಪತಿಯನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದ ಪ್ರಿಯತಮ, ಪ್ರಿಯತಮೆ ಸೇರಿ 10 ಮಂದಿಯನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಪ್ಸರ್ ಖಾನ್ (41), ಈತನ ಪ್ರಿಯತಮೆ ತಸ್ಲಿಂ ಭಾನು (29), ತಬ್ರೇಜ್ ಪಾಷ (26), ಸೈಯದ್ ವಸೀಂ (26), ವೆಂಕಟೇಶ್ (19), ಭರತ್ (18), ಯುಗೇಂದ್ರ (19), ಚೇತನ್ (19), ಇಬ್ರಾಹಿಂ (19) ಹಾಗೂ ಮತ್ತೊಬ್ಬನನ್ನು ಬಂಧಿಸಲಾಗಿದೆ.

ಮಾ.19ರಂದು ಸಂಜೆ 6.30ರ ಸುಮಾರಿನಲ್ಲಿ ನ್ಯೂ ಗುರಪ್ಪನಪಾಳ್ಯ ಟಿಂಬರ್‍ಗಲ್ಲಿ, 4ನೆ ಮುಖ್ಯರಸ್ತೆ, ಸರ್ಕಾರ್ ಗ್ಲಾಸ್ ಮತ್ತು ಪ್ಲೇವುಡ್ ಅಂಗಡಿಯ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಮಹಮ್ಮದ್ ಶಫಿ ಎಂಬುವವರನ್ನು ಮಾರಕಾಸ್ತ್ರಗಳಿಂದ ಹೊಡೆದು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಸುದ್ದಗುಂಟೆ ಪಾಳ್ಯ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಶ್ರೀನಾಥ್ ಮಹದೇವ್ ಜೋಷಿ, ಮೈಕೋ ಲೇಔಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸುಧೀರ್ ಹೆಗಡೆ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ನಟರಾಜ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೊಲೆಗೆ ಸುಪಾರಿ ಪಡೆದಿರುವುದು ಗೊತ್ತಾಗಿದೆ.

ಆರೋಪಿ ಅಪ್ಸರ್‍ಖಾನ್‍ಗೆ ಎರಡು ವರ್ಷಗಳ ಹಿಂದೆ ಸಂಬಂಧಿಕರ ಮದುವೆಯಲ್ಲಿ ಆರೋಪಿತೆ ತಸ್ಲಿಂ ಭಾನು ಪರಿಚಯವಾಗಿ ಪರಸ್ಪರ ಆಕರ್ಷಣೆಗೊಳಗಾಗಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಅಕ್ರಮ ಸಂಬಂಧಕ್ಕಾಗಿ ತಸ್ಲಿಂ ಭಾನು ಅವರ ಪತಿ ಮಹಮ್ಮದ್ ಶಫಿಯನ್ನು ಮುಗಿಸಲು ಅಪ್ಸರ್ ಖಾನ್ ಸಂಚು ರೂಪಿಸುತ್ತಾನೆ. ಮಹಮ್ಮದ್ ಶಫಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು 75 ಲಕ್ಷ ಹಣವನ್ನು ರಿಯಲ್ ಎಸ್ಟೇಟ್ ಬಿಜಿನೆಸ್‍ನಲ್ಲಿ ಮೈಸೂರಿನಲ್ಲಿ ಇನ್‍ವೆಸ್ಟ್ ಮಾಡಿಸಿ ಶಫಿಗೆ 5 ಲಕ್ಷ ರೂ. ಕಮಿಷನ್ ಕೊಡುವುದಾಗಿ ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದನು.

ಆ ಮೂಲಕ ಆತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಮುಂದುವರಿಸಿದ್ದು, ಈ ಸಂಬಂಧಕ್ಕೆ ಅಡ್ಡಿಯಾಗಿದ್ದ ಮಹಮ್ಮದ್ ಶಫಿಯನ್ನು ಮಾಟ-ಮಂತ್ರದಿಂದ ಮುಗಿಸಲು ಇಬ್ಬರೂ ಸೇರಿ ಪ್ರಯತ್ನಿಸಿ ವಿಫಲರಾಗಿದ್ದರು. ನಂತರ ಹೇಗಾದರೂ ಮಾಡಿ ಮಹಮ್ಮದ್ ಶಫಿಯನ್ನು ಕೊಲೆ ಮಾಡಬೇಕೆಂಬ ಉದ್ದೇಶದಿಂದ ಅಪ್ಸರ್‍ಖಾನ್ ಮತ್ತು ಮೃತನ ಪತ್ನಿ ತಸ್ಲಿಂ ಭಾನು ಸುಪಾರಿ ಕೊಟ್ಟು ಕೊಲೆ ಮಾಡಲು ನಿರ್ಧರಿಸಿದ್ದಾರೆ. ಅದರಂತೆ ಅಪ್ಸರ್ ಖಾನ್ ಸಂಬಂಧಿ ಕ್ರಿಮಿನಲ್ ಹಿನ್ನೆಲೆಯಿರುವ ತಬ್ರೇಜ್ ಹಾಗೂ ವಸೀಂನಿಗೆ ಸುಪಾರಿ ನೀಡಿದ್ದು, ಸುಪಾರಿ ಪಡೆದ ಇವರಿಬ್ಬರೂ ತಮಗೆ ಪರಿಚಯವಿರುವ ಉಳಿದ ಆರೋಪಿಗಳಿಗೆ ತಲಾ 2 ಲಕ್ಷ ರೂ. ಸುಪಾರಿ ಹಣ ಹಾಗೂ ಪ್ರಕರಣದ ಖರ್ಚು-ವೆಚ್ಚ ಕೊಡುವುದಾಗಿ ಹೇಳಿದ್ದಾರೆ.

ಅಪ್ಸರ್‍ಖಾನ್‍ನ ಒಳಸಂಚಿನಂತೆ ಮಾರ್ಚ್ 19ರಂದು ಕಮಿಷನ್ ಹಣ ಕೊಡುವುದಾಗಿ ಮಹಮ್ಮದ್ ಶಫಿಯನ್ನು ನ್ಯೂ ಗುರಪ್ಪನಪಾಳ್ಯ, ಟಿಂಬರ್ ಗಲ್ಲಿಗೆ ಬರುವಂತೆ ಹೇಳಿ ಅಲ್ಲಿಗೆ ಸುಪಾರಿ ಪಡೆದಿದ್ದ ಆರೋಪಿಗಳನ್ನು ಕರೆಸಿಕೊಂಡಿದ್ದಾನೆ. ಆರೋಪಿಗಳು ಮಹಮ್ಮದ್ ಶಫಿಯನ್ನು ಲಾಂಗ್, ಮಚ್ಚು, ರಾಡ್‍ಗಳಿಂದ ಹೊಡೆದು ಕೊಲೆಮಾಡಿ ತಲೆಮರೆಸಿಕೊಂಡಿದ್ದರು.

ತನಿಖಾ ತಂಡವು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್‍ಗಳು, ವಾಹನಗಳು, ಮಾರಕಸ್ತ್ರಗಳಾದ ಲಾಂಗು, ಮಚ್ಚು, ರಾಡು, ಸುಪಾರಿ ಪಡೆದಿದ್ದ ಹಣ ಹಾಗೂ ಅಪ್ಸರ್‍ಖಾನ್ ತಸ್ಲೀಂ ಭಾನುಗೆ ಪ್ರೀತಿಯ ಕಾಣಿಕೆಯಾಗಿ ನೀಡಿದ್ದ ಉಡುಗೊರೆಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಯಶಸ್ವಿ ಕಾರ್ಯಚರಣೆಯನ್ನು ಪೊಲೀಸ್ ಆಯುಕ್ತರು ಮತ್ತು ಮಾನ್ಯ ಹೆಚ್ಚುವರಿ ಪೊಲೀಸ್ ಆಯುಕ್ತರು ಪ್ರಶಂಸಿಸಿದ್ದಾರೆ.

Facebook Comments