ಸೂಡಾನ್ ಪ್ರಜೆ ಬಂಧನ : ಗಾಂಜಾ ವಶ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಜೂ.7-ವಿದ್ಯಾಭ್ಯಾಸದ ವೀಸಾ ಪಡೆದು ಬಂದಿದ್ದ ಸೂಡಾನ್ ದೇಶದ ಪ್ರಜೆಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ 1280 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.  ಅಹಮ್ಮದ್ ಮೊಹಮ್ಮದ್ ಮೂಸಾ ಬಂಧಿತ ಆರೋಪಿಯಾಗಿದ್ದು, ಈಗ ಬೆಂಗಳೂರಿನ ಪ್ರತಿಷ್ಟಿತ ಕಾಲೇಜೊಂದರ ಮೆಡಿಕಲ್ ವಿದ್ಯಾರ್ಥಿ ಎಂದು ತಿಳಿದುಬಂದಿದೆ.

ವಿದ್ಯಾಭ್ಯಾಸದ ನಿಮಿತ್ತ ವೀಸಾ ಪಡೆದು ಬಂದಿದ್ದ ಈತ ಗ್ರಾಮಾಂತರ ವ್ಯಾಪ್ತಿಯ ಹಗ್ಗೆರೆ ಬಸ್ ನಿಲ್ದಾಣದ ಬಳಿ ಕಪ್ಪು ಬಣ್ಣದ ಬ್ಯಾಗ್‍ನ್ನು ಹಾಕಿಕೊಂಡು ಅನುಮಾನಸ್ಪದವಾಗಿ ತಿರುಗಾಡುತ್ತಿದ್ದನು.

ಈ ಬಗ್ಗೆ ಪ್ರೊಬಷನರಿ ಡಿವೈಎಸ್ಪಿ ಶಾಂತರವೀರ ಅವರಿಗೆ ಬಂದ ಮಾಹಿತಿ ಮೇರೆಗೆ ತುಮಕೂರು ಗ್ರಾಮಾಂತರ ಠಾಣೆ ಪಿಎಸ್‍ಐ ಸುಂದರ್, ಸಿಬ್ಬಂದಿಗಳಾದ ತಿಮ್ಮರಾಜು, ಪ್ರಾಣೇಶ, ಗೋ.ಮುನಿಯಪ್ಪ ಅವರನ್ನೊಳಗೊಂಡ ತಂಡ ಸ್ಥಳಕ್ಕೆ ತೆರಳಿ ಈತನನ್ನು ವಶಕ್ಕೆ ಪಡೆದು ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಅಪಾರ ಪ್ರಮಾಣದ ಗಾಂಜಾ ಸೇದುವ ಉಪಕರಣಗಳು ಇರುವುದು ಕಂಡುಬಂದಿದೆ.

ಈತನನ್ನು ಠಾಣೆಗೆ ಕರೆದು ವಿಚಾರಣೆಗೊಳಪಡಿಸಿದಾಗ ತಾನು ಸೂಡಾನ್ ದೇಶದ ಪ್ರಜೆ, ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಕಾಲೇಜು ಫ್ರೆಂಡ್ಸ್‍ಗಳಿಗೆ ಕೊಡುವುದಕ್ಕಾಗಿ ಗಾಂಜಾವನ್ನು ತಂದಿದ್ದಾಗಿ ಒಪ್ಪಿಕೊಂಡಿದ್ದಾನೆ.

ಮಹಿಳೆ ಸೆರೆ:  ಮತ್ತೊಂದು ಪ್ರಕರಣದಲ್ಲಿ ಸಿ.ಎಸ್.ಪುರ ಠಾಣೆ ಪಿಎಸ್‍ಐ ಅವರಿಗೆ ಮಾಹಿತಿ ಮೇರೆಗೆ ಕಲ್ಲೂರು ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಲಕ್ಷ್ಮಿದೇವಮ್ಮ ಎಂಬುವರನ್ನು ಬಂಧಿಸಿ 535 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಎರಡು ಪ್ರಕರಣಗಳ ಕಾರ್ಯಾಚರಣೆ ನಡೆಸಿದ ಪೊಲೀಸ್ ಸಿಬ್ಬಂದಿ ವರ್ಗವನ್ನು ಜಿಲ್ಲಾ ಎಸ್ಪಿ ಡಾ.ಕೆ.ವಂಶಿಕೃಷ್ಣ ಅವರು ಅಭಿನಂದಿಸಿದ್ದಾರೆ.

Facebook Comments