ತುರುವೇಕೆರೆಯಲ್ಲೊಂದು ಐಎಂಎ ಮಾದರಿ ಕೇಸ್, ಬಲೆಗೆ ಬಿದ್ದ ನಾಲ್ವರು ವಂಚಕರು

ಈ ಸುದ್ದಿಯನ್ನು ಶೇರ್ ಮಾಡಿ

ತುರುವೇಕೆರೆ, ಜೂ.20- ಜ್ಯುವೆಲರಿ ಅಂಗಡಿಯಲ್ಲಿ ಗೋಲ್ಡ್ ಬೆನಿಫಿಟ್ಸ್ ಸ್ಕೀಮ್ ಮತ್ತು ಚೀಟಿ ವ್ಯವಹಾರ ನಡೆಸಿ ಹೂಡಿಕೆದಾರರ ಹಣದೊಂದಿಗೆ ಪರಾರಿಯಾಗಿದ್ದ ನಾಲ್ವರನ್ನು ತುರುವೇಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ, ಭರತ, ಶರತ್ ಮತ್ತು ಗಂಗಾಧರ್ ಬಂಧಿತ ಆರೋಪಿಗಳು.

ತುರುವೇಕೆರೆ ಪಟ್ಟಣದಲ್ಲಿ ಮಂಜುನಾಥ್ ಮತ್ತು ಗಂಗಾಧರ್ ತಳ್ಳುವ ಗಾಡಿಯಲ್ಲಿ ಸಿಡಿಗಳನ್ನು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ತದನಂತರ ಪಟ್ಟಣದ ವೈಟಿ ರಸ್ತೆಯ ಕಟ್ಟಡವೊಂದನ್ನು ಬಾಡಿಗೆ ಪಡೆದು ವೈರೈಟಿ ಸ್ಟೋರ್ಸ್ ಎಂಬ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದನು.

ಬಳಿಕ ಈ ಅಂಗಡಿ ಪಕ್ಕದಲ್ಲೇ ಬಟ್ಟೆ ಮತ್ತು ಜ್ಯುವೆಲರಿ ಅಂಗಡಿಯನ್ನು ಪ್ರಾರಂಭಿಸಿ ಸಾರ್ವಜನಿಕರಿಗೆ ನಂಬಿಕೆ ಬರುವಂತೆ ಗೋಲ್ಡ್ ಬೆನಿಫಿಟ್ ಸ್ಕೀಮ್ ಮತ್ತು ಚೀಟಿ ವ್ಯವಹಾರ ನಡೆಸಲು ಪ್ರಾರಂಭಿಸಿ ಹೆಚ್ಚಿನ ಆದಾಯ ಮಾಡಿಕೊಂಡು ದೊಡ್ಡ ಅಂಗಡಿಯನ್ನು ಪ್ರಾರಂಭಿಸುವ ಉದ್ದೇಶದಿಂದ 2017ರಲ್ಲಿ ತಾಲ್ಲೂಕು ಕಚೇರಿ ರಸ್ತೆಯಲ್ಲಿ ಎರಡು ಮಳಿಗೆಗಳನ್ನು ಬಾಡಿಗೆ ಪಡೆದು ದೊಡ್ಡದಾಗಿ ಚಿನ್ನಬೆಳ್ಳಿ ಅಂಗಡಿ ಮತ್ತು ಬಟ್ಟೆ ಅಂಗಡಿಯನ್ನು ಆರಂಭಿಸಿದ್ದರು.

ಆರೋಪಿ ಮಂಜುನಾಥ, ಈತನ ಸಹೋದರರಾದ ಗಂಗಾಧರ್, ಶಿವಕುಮಾರ್ ಮತ್ತು ಇವರ ಮಕ್ಕಳಾದ ಶರತ್ ಮತ್ತು ಭರತ್ ಸೇರಿಕೊಂಡು ವ್ಯಾಪಾರ ಮಾಡುತ್ತಾ ಐಷರಾಮಿ ಜೀವನ ನಡೆಸುತ್ತಿದ್ದರು.

ವ್ಯಾಪಾರ ಚೆನ್ನಾಗಿ ನಡೆಯುತ್ತಿ ದ್ದರಿಂದ ಹೆಚ್ಚು ಹೆಚ್ಚು ಗೋಲ್ಡ್ ಬೆನಿಫಿಟ್ ಸ್ಕೀಮ್ ಆರಂಭಿಸಿ ಸುಮಾರು 300ರಿಂದ 400 ಜನರನ್ನು ಸದಸ್ಯರನ್ನಾಗಿ ಮಾಡಿಕೊಂಡು ಕಾಡ್ ್ ವಿತರಿಸಿ, ತಿಂಗಳಿಗೆ500- 2000 ರೂ.ವರೆಗೂ ಕಟ್ಟಿಸಿಕೊಳ್ಳುತ್ತಿದ್ದರು.

ಪ್ರತಿ ತಿಂಗಳು ಡ್ರಾ ಮಾಡಿ ವಿಜೇತರಿಗೆ ಬಹುಮಾನ ಕೊಟ್ಟು ನಂಬಿಕೆ ಗಳಿಸಿದ್ದ ಇವರು ತದನಂತರ ನಿಮ್ಮ ಹಳೆಯ ಚಿನ್ನ ಕೊಟ್ಟರೆ ಯಾವುದೇ ವೇಸ್ಟೇಜ್ ಇಲ್ಲದೆ ಅಷ್ಟೇ ತೂಕದ ನಿಮ್ಮಗೆ ಒಪ್ಪುವ ವಿನ್ಯಾಸದ ಆಭರಣ ಮಾಡಿಕೊಡುವುದಾಗಿ ಹೇಳಿ ಸುಮಾರು 50ರಿಂದ 60 ಜನರಿಂದ 2 ಕೆಜಿ ತೂಕದ ಆಭರಣ ಪಡೆದು ನಂತರ ಮೋಸ ಮಾಡಿದ್ದರು.

ಅಲ್ಲದೆ ನಾಗರಿಕರಿಗೆ ಹೆಚ್ಚಿನ ಬಡ್ಡಿ ಕೊಡುತ್ತೇವೆ ಎಂದು ಸುಮಾರು 50 ಲಕ್ಷ ರೂ. ಪಡೆದು ಅವರಿಗೆ ಹಣ ಹಿಂದಿರುಗಿಸದೆ ಅಂಗಡಿ ಬೀಗ ಹಾಕಿಕೊಂಡು ಮೇ 27ರಂದು ತಲೆಮರೆಸಿಕೊಂಡಿದ್ದರು.

ಈ ಬಗ್ಗೆ ತುರುವೇಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ತುರುವೇಕೆರೆ ತಾಲ್ಲೂಕಿನ ಟಿಬಿ ಕ್ರಾಸ್ ಬಳಿ ಆರೋಪಿಗಳು ಇರುವುದನ್ನು ಪತ್ತೆಹಚ್ಚಿ, ಮಂಜುನಾಥ್ ಮತ್ತು ಭರತ್‍ನನ್ನು ಬಂಧಿಸಿ ನಂತರ ಹೆಚ್ಚಿನ ವಿಚಾರಣೆಗೊಳಪಡಿಸಿ ಇನ್ನಿತರ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಬಾಣಸಂದ್ರ ಗ್ರಾಮದ ರೈಲ್ವೆ ನಿಲ್ದಾಣದ ಬಳಿ ಗಂಗಾಧರ್ ಮತ್ತು ಶರತ್‍ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.

Facebook Comments