ಬಂಗಾರದ ಲೇಪನ ಮಾಡಿರುವ ಉಂಗುರಗಳನ್ನು ಮಾರಾಟ ಮಾಡಲು ಯತ್ನಿಸಿದ್ದವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜು.30- ಬಂಗಾರದ ಲೇಪನ ಮಾಡಿರುವ ಉಂಗುರಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ವಂಚಕರನ್ನು ಪೊಲೀಸರು ಬಂಧಿಸಿ 5 ಲಕ್ಷ ರೂ. ಬೆಲೆಬಾಳುವ ಶೇ.30ರಷ್ಟು ಬಂಗಾರ ಹೊಂದಿದ್ದ 32 ಬಂಗಾರ ಲೇಪನ ಉಂಗುರಗಳು ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ವರ್ತೂರಿನಲ್ಲಿ ಚಾಲಕವೃತ್ತಿ ಮಾಡುತ್ತಿದ್ದ ಮಧುರಾನಗರ ನಿವಾಸಿ ಶಿವಶಂಕರ (32) ಮತ್ತು ಎಸ್‍ಎನ್ ಪಾಳ್ಯದ ಪಾನಿಪುರಿ ವ್ಯಾಪಾರಿ ಲೋಕೇಶ್ (30) ಬಂಧಿತ ವಂಚಕರು.

ಹೆಬ್ಬೂರು-ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಜುಲೈ 8ರಂದು ಬೆಳಗ್ಗೆ 10.45ರ ಸುಮಾರಿನಲ್ಲಿ ಬೈಕ್‍ನಲ್ಲಿ ಇಬ್ಬರು ಅನುಮಾನಾಸ್ಪದವಾಗಿ ತಿರುಗಾಡುತ್ತ ಬಂಗಾರದ ಲೇಪನ ಮಾಡಿರುವ ಉಂಗುರಗಳನ್ನು ಮಾರಾಟ ಮಾಡಲು ಹೊಂಚುಹಾಕುತ್ತಿದ್ದರು.

ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಎಎಸ್‍ಐ ಭೂಮೇಶ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ತೆರಳಿ ಈ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬಂಗಾರದ ಲೇಪನ ಮಾಡಿರುವ ಉಂಗುರಗಳನ್ನು ಮಾರಾಟ ಮಾಡಲು ಬಂದಿದ್ದಾಗಿ ಒಪ್ಪಿಕೊಂಡಿದ್ದಾರೆ.

ಆರೋಪಿಗಳು ಶೇ.30ರಷ್ಟು ಬಂಗಾರ ಲೇಪನ ಮಾಡಿರುವ 30 ಉಂಗುರಗಳನ್ನು ಬೇರೆಯವರ ಹೆಸರುಗಳಲ್ಲಿ ಮುತ್ತೂಟ್ ಫೈನಾನ್ಸ್, ಐಐಎಫ್‍ಎಲ್, ಪಿನ್‍ಕಾರ್ಪ್, ಮಣಪ್ಪುರಂ ಫೈನಾನ್ಸ್ ಹಾಗೂ ಗಿರವಿ ಅಂಗಡಿಗಳಲ್ಲಿ ಅಡವಿಟ್ಟಿರುವುದನ್ನು ಪೊಲೀಸರಿಗೆ ತಿಳಿಸಿದ್ದು, ಈ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಇಬ್ಬರು ಮನೆಗಳ್ಳರ ಬಂಧನ: ಮನೆಯೊಂದರ ಬೀಗ ಒಡೆದು ಆಭರಣ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳ್ಳತನ ಮಾಡಿದ್ದ ಚನ್ನಪಟ್ಟಣದ ಶರತ್‍ಕುಮಾರ್ (31) ಮತ್ತು ಗುಬ್ಬಿ ತಾಲೂಕಿನ ಸುನಿಲ್ (21)ನನ್ನು ಬಂಧಿಸಿ 25 ಸಾವಿರ ರೂ. ಬೆಲೆಬಾಳುವ ಲ್ಯಾಪ್‍ಟಾಪ್ ಹಾಗೂ ಇನ್ನತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಏ.17ರಂದು ರಾತ್ರಿ 8 ಗಂಟೆ ಸುಮಾರಿನಲ್ಲಿ ಪಾರ್ವತಮ್ಮ ಎಂಬುವವರ ಮನೆಯ ಬೀಗ ಒಡೆದು ಆಭರಣ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳ್ಳರು ದೋಚಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಪತ್ತೆಗಾಗಿ ರಚಿಸಲಾಗಿದ್ದ ತಂಡ ಹೊನ್ನುಡಿಕೆ ಹ್ಯಾಂಡ್‍ಫೋಸ್ಟ್ ಬಳಿ ಈ ಇಬ್ಬರನ್ನು ಬಂಧಿಸಿ ಲ್ಯಾಪ್‍ಟಾಪ್ ವಶಪಡಿಸಿಕೊಂಡಿದ್ದಾರೆ.

ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣದಲ್ಲಿ 90 ಗ್ರಾಂ ಬಂಗಾರದ ಆಭರಣಗಳನ್ನು , ಬೊಮ್ಮನಹಳ್ಳಿಯ ಐಐಎಫ್‍ಎಲ್‍ನಲ್ಲಿ ಅಡವಿಟ್ಟಿದ್ದ ಒಡವೆಗಳನ್ನು ಹರಾಜು ಮಾಡಿದ್ದು, 1.40 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಆರೋಪಿ ಸುನಿಲ್‍ನಿಂದ 8000ರೂ. ಬೆಲೆಬಾಳುವ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments