ಮೂರು ಪ್ರತ್ಯೇಕ ಪ್ರಕರಣ : ನಾಲ್ವರ ಬಂಧನ, ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತು ವಶ
ಬೆಂಗಳೂರು,ಡಿ.1- ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಮತ್ತು ಚರಸ್ ಮಾರಾಟ ಮಾಡುತ್ತಿದ್ದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರನ್ನು ಬಂಧಿಸಿರುವ ಪಶ್ಚಿಮ ವಿಭಾಗದ ಪೊಲೀಸರು ಲಕ್ಷಾಂತರು ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಜ್ಞಾನ ಭಾರತಿ: ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ವಿಶ್ವೇಶ್ವರಯ್ಯ ಬಡಾವಣೆ 5ನೇ ಬ್ಲಾಕ್ನ ಉಳ್ಳಾಲ ಉಪನಗರ ಕೆರೆ ಬಳಿಯ ಬಸ್ ನಿಲ್ದಾಣ ಸಮೀಪ ಮಾದಕ ವಸ್ತು ಮಾರಾಟ ಮಾಡಲು ವ್ಯಕ್ತಿ ಯೊಬ್ಬ ನಿಂತಿದ್ದಾನೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ತಕ್ಷಣ ಕೆಂಗೇರಿ ಉಪ ವಿಭಾಗದ ಎಸಿಪಿ ಕೃಷ್ಣ ಕುಮಾರ್ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಕುಣಿಗಲ್ ಮೂಲದ ಪುನೀತ್(32) ಎಂಬಾತನನ್ನು ಬಂಧಿಸಿದ್ದಾರೆ. ಈತನಿಂದ 2 ಲಕ್ಷ ರೂ. ಬೆಲೆಯ 10 ಕೆ.ಜಿ.ಗಾಂಜಾ, 600 ರೂ. ವಶಕ್ಕೆ ಪಡೆದಿದ್ದಾರೆ. ಈತ ವಿದ್ಯಾರ್ಥಿಗಳಿಗೆ, ಯುವಕರಿಗೆ, ಸಾರ್ವಜನಿಕರಿಗೆ ಮಾದಕ ವಸ್ತು ಗಾಂಜಾವನ್ನು ಚಿಕ್ಕ ಚಿಕ್ಕ ಪ್ಯಾಕೇಟ್ ಮಾಡಿ ಮಾರಾಟ ಮಾಡುತ್ತಿದ್ದುದು ವಿಚಾರಣೆಯಿಂದ ತಿಳಿದು ಬಂದಿದೆ.
ಚಂದ್ರಾಲೇಔಟ್: ನಿನ್ನೆ ಮಧ್ಯಾಹ್ನ 12.45ರ ಸುಮಾರಿನಲ್ಲಿ ಅರುಂಧತಿನಗರ ಪಾರ್ಕ್ ಬಳಿ ಮಾದಕ ವಸ್ತು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ಬ್ರಿಜೇಶ್ ಮ್ಯಾಥ್ಯೂ ಮತ್ತವರ ಸಿಬ್ಬಂದಿ ತಂಡ ಸ್ಥಳಕ್ಕೆ ತೆರಳಿ ಮಧು ಮತ್ತು ವಿಜಯಕುಮಾರ್ ಎಂಬುವರನ್ನು ಬಂಧಿಸಿ 395 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಇವರಿಗೆ ಗಾಂಜಾ ಸರಬರಾಜು ಮಾಡಿರುವ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.
ಕೆ.ಪಿ.ಅಗ್ರಹಾರ:
ಮಾಗಡಿ ರಸ್ತೆ ಕುಷ್ಠರೋಗ ಆಸ್ಪತ್ರೆ ಸಮೀಪ ಮಾದಕ ವಸ್ತು ಚರಸ್ ಅನ್ನು ಮಾರಾಟ ಮಾಡಲು ಬಂದಿದ್ದ ಫೆಡ್ರಿಕ್ ಮೆಡಾರ್ಡೋ (32) ಎಂಬಾತನನ್ನು ಕೆ.ಪಿ.ಅಗ್ರಹಾರ ಠಾಣೆ ಇನ್ಸ್ಟೆಕ್ಟರ್ ಸದಾನಂದ ಮತ್ತವರ ತಂಡ ಬಂಧಿಸಿ 665 ಗ್ರಾಂ ತೂಕದ ಚರಸ್ ವಶಪಡಿಸಿಕೊಂಡಿದ್ದಾರೆ.