ಮೂವರು ಮನೆಗಳ್ಳರ ಬಂಧನ : 5.48 ಲಕ್ಷ ಮೌಲ್ಯದ ಆಭರಣ ವಶ

ಈ ಸುದ್ದಿಯನ್ನು ಶೇರ್ ಮಾಡಿ

arrestedಅರಸೀಕೆರೆ,ಜ.9- ಮನೆಗಳ್ಳತನ ಮಾಡುತ್ತಿದ್ದ ಆಂಧ್ರ ಮೂಲದ ವ್ಯಕ್ತಿ ಸೇರಿದಂತೆ ಮೂವರನ್ನು ಅರಸೀಕೆರೆ ನಗರಠಾಣೆ ಪೊಲೀಸರು ಬಂಧಿಸಿ 5.48 ಲಕ್ಷ ರೂ. ಬೆಲೆ ಬಾಳುವ 203 ಗ್ರಾಂ ತೂಕದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.ಆಂಧ್ರಮೂಲದ ಅಭಿಷೇಕ್(23), ಧಾರವಾಡ ಮೂಲದ ಅಮೀರ್‍ಜಾನ್(62)ಮತ್ತು ಬೇಲೂರಿನ ಸಂತೋಷ್(24) ಬಂಧಿತ ಆರೋಪಿಗಳು.

ಅರಸೀಕೆರೆ ನಗರ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಅಧೀಕ್ಷಕ ಡಾ.ಪ್ರಕಾಶ್‍ಗೌಡ ಮತ್ತು ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಂದಿನಿ ಹಾಗೂ ಅರಸೀಕೆರೆ ಉಪವಿಭಾಗದ ಡಿವೈಎಸ್ಪಿ ಸದಾನಂದ ತಿಪ್ಪಣ್ಣನವರ್ ಮಾರ್ಗದರ್ಶನದಲ್ಲಿ ನಗರ ಠಾಣೆ ಇನ್‍ಸ್ಪೆಕ್ಟರ್ ರಂಗಸ್ವಾಮಿ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಈ ತಂಡವು ಆರೋಪಿಗಳ ಪತ್ತೆಗಾಗಿ ತನಿಖೆ ಕೈಗೊಂಡು ಪ್ರಮುಖ ಆರೋಪಿ ಸಂತೋಷ್ ಎಂಬಾತನನ್ನು ಬಂಧಿಸಿ ಈತನ ಹೇಳಿಕೆ ಮೇರೆಗೆ ಮತ್ತೊಬ್ಬ ಆರೋಪಿ ಅಭಿಷೇಕನನ್ನು ಸಹ ಪತ್ತೆ ಮಾಡಿ ಬಂಧಿಸಿತ್ತು.

ಆರೋಪಿಗಳು ಕಳ್ಳತನ ಮಾಡಿ ಮಾರಾಟ ಮಾಡಿದ್ದ ಚಿನ್ನದ ಆಭರಣಗಳನ್ನು ಬೆಂಗಳೂರು ಹಾಗೂ ಪಿರಿಯಾಪಟ್ಟಣದಲ್ಲಿ 135 ಗ್ರಾಂ ತೂಕದ 3.65 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಇದೇ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಅಮೀರ್‍ಜಾನ್ ಎಂಬಾತನನ್ನು ಬಂಧಿಸಿ ಕಳವು ಮಾಡಿ ಮಾರಾಟ ಮಾಡಿದ್ದ ಚಿನ್ನದ ಆಭರಣಗಳನ್ನು ಆಂಧ್ರಪ್ರದೇಶದ ಪೆನ್ನುಗೊಂಡಕ್ಕೆ ಹೋಗಿ 68 ಗ್ರಾಂ ತೂಕದ 1.83 ಲಕ್ಷ ಬೆಲೆ ಬಾಳುವ ಆಭರಣವನ್ನು ವಶಪಡಿಸಿಕೊಳ್ಳುವಲ್ಲಿ ಈ ತಂಡ ಯಶಸ್ವಿಯಾಗಿದೆ.

Facebook Comments