ವನ್ಯಮೃಗ ಮತ್ತು ಮಾನವ ಸಂಘರ್ಷ ತಪ್ಪುವುದೆಂದು..?

ಈ ಸುದ್ದಿಯನ್ನು ಶೇರ್ ಮಾಡಿ

ಅರಸೀಕೆರೆ, ಫೆ.26- ಕಾಡು ಪ್ರಾಣಿಗಳು ಹಾಗೂ ಮನುಷ್ಯರ ನಡುವಿನ ಸಂಘರ್ಷ ತಾಲ್ಲೂಕಿನ ಗುಡ್ಡಗಾಡು ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಗ್ರಾಮಗಳಲ್ಲಿ ಮುಂದುವರಿಯುತ್ತಲೇ ಬಂದಿದ್ದು, ಕ್ರಮ ಕೈಗೊಳ್ಳಬೇಕಾದ ಅರಣ್ಯ ಇಲಾಖೆ ಹಾಗೂ ಸರ್ಕಾರ ಮೀನಾಮೇಷ ಎಣಿಸುತ್ತಿರು ವುದರಿಂದ ಮತ್ತಷ್ಟು ಸಾವು-ನೋವಿಗೆ ಕಾರಣವಾಗಲಿದೆ ಎಂಬ ಆತಂಕ ತಾಲೂಕಿನ ಜನತೆಯಲ್ಲಿ ಮನೆ ಮಾಡಿದೆ.

ನಾಗಪುರಿ ಅರಣ್ಯ ಸೇರಿದಂತೆ ಸಣ್ಣಪುಟ್ಟ ಬೆಟ್ಟ-ಗುಡ್ಡಗಳ ಸಾಲನ್ನು ತಾಲ್ಲೂಕಿನ ಅಲ್ಲಲ್ಲಿ ಕಾಣಬಹುದಾಗಿದ್ದು, ಸಹಜವಾಗಿಯೇ ನಾಗಪುರಿ ಅರಣ್ಯ ಹಾಗೂ ಬೆಟ್ಟ-ಗುಡ್ಡಗಳು ಕಾಡು ಪ್ರಾಣಿಗಳ ಆಶ್ರಯ ತಾಣಗಳಾಗಿವೆ. ಆದರೆ, ಸಮರ್ಪಕವಾಗಿ ನೀರು ಮತ್ತು ಆಹಾರ ವನ್ಯಮೃಗಗಳಿಗೆ ಸಿಗದ ಕಾರಣ ಅರಣ್ಯ ಹಾಗೂ ಬೆಟ್ಟ-ಗುಡ್ಡಗಳಿಗೆ ಹೊಂದಿಕೊಂಡಂತೆ ಇರುವ ಗ್ರಾಮಗಳಿಗೆ ನುಗ್ಗುವ ಕಾಡುಪ್ರಾಣಿಗಳು ಜನ-ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ.ಅಲ್ಲದೆ, ತಮ್ಮ ಪ್ರಾಣಕ್ಕೂ ಸಂಚಕಾರ ತಂದುಕೊಳ್ಳುತ್ತಿರುವುದು ದುರ್ದೈವದ ಸಂಗತಿ.

ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವೆಡೆ ದಾಳಿ ಮಾಡಿರುವ ಚಿರತೆಗಳು ಆರು ಜನರಿಗೆ ತೀವ್ರ ಸ್ವರೂಪದ ಗಾಯಗೊಳಿಸಿದ್ದು, ಹಸು, ಎಮ್ಮೆ, ಕುರಿ, ಮೇಕೆ ಹೀಗೆ 25ಕ್ಕೂ ಹೆಚ್ಚು ಜಾನುವಾರುಗಳನ್ನು ಬಲಿ ತೆಗೆದುಕೊಂಡಿವೆ. ಮತ್ತೊಂದೆಡೆ ಕರಡಿ ಕೂಡ ಇಬ್ಬರು ರೈತರ ಮೇಲೆರಗಿ ಗಾಯಗೊಳಿಸಿದೆ. ಈ ಎಲ್ಲಾ ಘಟನೆಗಳನ್ನು ನೋಡಿದರೆ ತಾಲ್ಲೂಕಿನಲ್ಲಿ ಮನುಷ್ಯ ಹಾಗೂ ಕಾಡು ಪ್ರಾಣಿಗಳ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಸಾಕ್ಷಿಯಾಗಿದೆ.

ಈ ನಡುವೆ ಅರಣ್ಯ ಇಲಾಖೆ ಆರು ಚಿರತೆಗಳು ಮತ್ತು ರೈತರ ಕೃಷಿ ಭೂಮಿಗೆ ಅಡ್ಡವಾಗಿ ನಿರ್ಮಿಸುವ ಬೇಲಿಗೆ ಸಿಕ್ಕಿಹಾಕಿಕೊಂಡ ಮೂರು ಕರಡಿಗಳನ್ನು ರಕ್ಷಿಸಿ ಅರಣ್ಯ ಇಲಾಖೆ ಸಿಬ್ಬಂದಿ ನೆರವಿನಿಂದ ನಾಗಪುರಿ ಅರಣ್ಯಕ್ಕೆ ಬಿಟ್ಟಿರುವ ಮಾಹಿತಿಯನ್ನು ಇಲಾಖೆ ಅಧಿಕಾರಿಗಳು ನೀಡುತ್ತಾರೆ. ಕಳೆದ ಸೋಮವಾರವಷ್ಟೇ ತಾಲ್ಲೂಕಿನ ಬೈರಗೊಂಡನಹಳ್ಳಿ ಸಮೀಪ ತಾಯಿ-ಮಗನ ಮೇಲೆ ಚಿರತೆಯೊಂದು ಏಕಾಏಕಿ ದಾಳಿ ನಡೆಸಿತು. ಈ ವೇಳೆ ಕಾದಾಡಿ ತನ್ನ ಹಾಗೂ ತನ್ನ ತಾಯಿ ಪ್ರಾಣ ಉಳಿಸಿಕೊಂಡ ಕಿರಣ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಡೇಕೆರೆ ತಾಂಡಾ ಸಮೀಪ ರಾಜಗೋಪಾಲ್ ಎಂಬುವರ ಮೇಲೆ ಎರಗಿದ ಚಿರತೆ ನಡುವೆ ಕಾದಾಟವಾಗಿ ಅಂತಿಮವಾಗಿ ಚಿರತೆಯನ್ನು ಕಲ್ಲಿನಿಂದ ಒಡೆದ ಪರಿಣಾಮ ಚಿರತೆ ಸಾವನ್ನಪ್ಪಿದೆ. ಇವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

# ಕಿರಣ್ ಪ್ರತಿಕ್ರಿಯೆ:
ಸೋಮವಾರ ಬೆಳಗ್ಗೆ ನಾನು ನನ್ನ ತಾಯಿ ಗ್ರಾಮದ ಹೊರವಲಯದ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಏಕಾಏಕಿ ಚಿರತೆಯೊಂದು ನನ್ನ ಹಿಂದೆ ಬರುತ್ತಿದ್ದ ನಮ್ಮ ತಾಯಿಯ ಮೇಲೆ ದಾಳಿ ಮಾಡಿತ್ತು. ಕೂಡಲೇ ನಾನು ನನ್ನ ತಾಯಿಯ ನೆರವಿಗೆ ಮುಂದಾದರು. ಈ ವೇಳೆ ನನ್ನ ಮೇಲೆ ಎಗರಿದ ಚಿರತೆ ಇಬ್ಬರನ್ನು ತೀವ್ರವಾಗಿ ಗಾಯಗೊಳಿಸಿತು. ಅಷ್ಟರಲ್ಲಿ ನಮ್ಮ ಕಿರುಚಾಟ ಕೇಳಿ ಗ್ರಾಮಸ್ಥರು ಓಡಿ ಬರುವಷ್ಟರಲ್ಲಿ ಚಿರತೆ ಅಲ್ಲಿಂದ ಕಾಲ್ಕಿತ್ತಿತು ಎಂದು ಎಂದು ಅಳಲು ತೋಡಿಕೊಳ್ಳುತ್ತಾರೆ ಚಿರತೆ ದಾಳಿಗೊಳಗಾದ ಗಾಯಾಳು ಕಿರಣï.

ಜನ-ಜಾನುವಾರುಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿರುವ ಕಾಡುಪ್ರಾಣಿಗಳ ಅಟ್ಟಹಾಸದಿಂದಾಗಿ ಗುಡ್ಡಗಾಡು ಹಾಗೂ ಅರಣ್ಯಕ್ಕೆ ಹೊಂದಿಕೊಂಡಂತಿರುವ ಗ್ರಾಮಗಳ ರೈತರು ತಮ್ಮ ಕೃಷಿ ಜಮೀನುಗಳಲ್ಲಿ ಕೆಲಸ ಮಾಡಲು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ರಮ ಕೈಗೊಳ್ಳಬೇಕಾದ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಾನುವಾರುಗಳು ಸಾವು-ನೋವು ಅನುಭವಿಸುವಂತಾಗಿದೆ ಎನ್ನುತ್ತಾರೆ ರೈತ ಮುಖಂಡ ಪ್ರಸನ್ನ ಕುಮಾರ್.

ಕಾಡು ಪ್ರಾಣಿಗಳ ಜೀವ ಉಳಿಸುವ ಸಲುವಾಗಿ ಇಲಾಖೆ ಬೋನಿಟ್ಟು ಆರು ಚಿರತೆ ಹಾಗೂ ಮೂರು ಕರಡಿಗಳನ್ನು ಪ್ರಾಣಾಪಾಯದಿಂದ ರಕ್ಷಿಸಿ ಮರಳಿ ಕಾಡಿಗೆ ಬಿಟ್ಟಿದ್ದರೂ ಈ ರೀತಿಯ ಪ್ರಕರಣಗಳು ಮರುಕಳಿಸುತ್ತಿವೆ. ಅರಣ್ಯ ಇಲಾಖೆ ಮೇಲಧಿಕಾರಿಗಳ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಲಯ ಅರಣ್ಯಾಧಿಕಾರಿ ದಯಾನಂದ್ ಹೇಳುತ್ತಾರೆ.

ಕಾಡು ಪ್ರಾಣಿಗಳು ಹಾಗೂ ಮನುಷ್ಯರ ನಡುವೆ ತಾಲ್ಲೂಕಿನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೇನೆ. ಹಾಗಾಗಿ ನಾಗಪುರಿ ಅರಣ್ಯವನ್ನು ಕರಡಿ ಧಾಮ ಎಂದು ಸರ್ಕಾರ ಈಗಾಗಲೇ ಘೋಷಿಸಿದ್ದು, ಗೆಜೆಟ್‍ನಲ್ಲಿ ಅನುಮೋದನೆ ದೊರೆಯಬೇಕಿದೆ. ನಾಗಪುರಿ ಅರಣ್ಯ ಹಾಗೂ ತಾಲ್ಲೂಕಿನ ಗುಡ್ಡಗಾಡು ವ್ಯಾಪ್ತಿಯ ಪ್ರದೇಶಗಳಲ್ಲಿ ಚೆಕ್ ಡ್ಯಾಮ್‍ಗಳನ್ನು ನಿರ್ಮಿಸಿ ಕಾಡುಪ್ರಾಣಿಗಳಿಗೆ ಕುಡಿಯಲು ನೀರು ಒದಗಿಸಿದರೆ ಅವು ನಾಡಿಗೆ ಬರುವುದಿಲ್ಲ ಎಂಬುದನ್ನು ಸರ್ಕಾರಕ್ಕೆ ಮನದಟ್ಟು ಮಾಡಿಕೊಟ್ಟಿದ್ದೇನೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದ್ದಾರೆ.

#ತಾಯಿಗೆ ತಕ್ಕ ಮಗ
ಒಂಭತ್ತು ತಿಂಗಳು ಹೆತ್ತು ಹೊತ್ತು ಸಾಕಿ ಸಲಹಿ ಇಷ್ಟು ದೊಡ್ಡವನಾಗಿ ಮಾಡಿದ ನನ್ನ ತಾಯಿಯ ಮುಂದೆ ನನ್ನ ಪ್ರಾಣ ಲೆಕ್ಕಕ್ಕಿಲ್ಲ. ನನ್ನ ಕಣ್ಣೆದುರು ಬಂದಿದ್ದು ನನ್ನ ತಾಯಿ ಮಾತ್ರ. ಹಾಗಾಗಿ ನನ್ನ ಪ್ರಾಣ ಲೆಕ್ಕಿಸದೆ ಚಿರತೆಯೊಂದಿಗೆ ಸೆಣೆಸಾಡಿದ ರೋಚಕ ಘಟನೆಯನ್ನು ಕಿರಣ್ ಪತ್ರಿಕೆಯೊಂದಿಗೆ ಎಳೆ ಎಳೆಯಾಗಿ ಹಂಚಿಕೊಂಡರು. ನಾನು ಮತ್ತು ನನ್ನ ತಾಯಿ ಬೈರಗೊಂಡನಹಳ್ಳಿ ಗ್ರಾಮದಿಂದ ಜಮೀನಿಗೆ ನಡೆದುಕೊಂಡು ಹೋಗುತ್ತಿದ್ದೆವು. ಆಗ ಏಕಾಏಕಿ ಎರಗಿದ ಚಿರತೆ ನನ್ನ ತಾಯಿ ಮೇಲೆ ದಾಳಿ ಮಾಡಿತು. ಈ ದೃಶ್ಯ ನನ್ನಲ್ಲಿ ರೋಷ-ಆಕ್ರೋಶ ತಂದಿತು.

ಈ ಹಿನ್ನೆಲೆಯಲ್ಲಿ ನನ್ನ ತಾಯಿಯನ್ನು ರಕ್ಷಿಸಿಕೊಳ್ಳಬೇಕೆಂದು ನಾನೂ ಕೂಡ ಚಿರತೆಯೊಂದಿಗೆ ಸೆಣೆಸಾಟಕ್ಕಿಳಿದೆ. ಕೊನೆಗೆ ಚಿರತೆ ನಿತ್ರಾಣಗೊಂಡು ಅಲ್ಲಿಂದ ಕಾಲ್ಕಿತ್ತಿತು. ಈ ಸಮಯದಲ್ಲಿ ರಕ್ತದ ಮಡುವಿನಲ್ಲೂ ನನಗಾದ ಸಂತೋಷಕ್ಕೆ ಬೆಲೆ ಕಟ್ಟಲು ಸಾಧ್ಯವಾಗಲಿಲ್ಲ. ತಾಯಿಯ ಪ್ರಾಣ ರಕ್ಷಿಸುವ ಮೂಲಕ ಈ ಜನ್ಮದಲ್ಲಿ ನನ್ನ ಅಮ್ಮನ ಋಣ ತೀರಿಸಿದ ತೃಪ್ತಿ ನನಗಿದೆ ಎಂದು ಆನಂದ ಭಾಷ್ಪ ಸುರಿಸಿದರು.

Facebook Comments