ಅರುಣ್ ಜೇಟ್ಲಿ ಅಗಲಿಕೆಗೆ ಕಂಬನಿ ಮಿಡಿದ ಗಣ್ಯರು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.24- ಕೇಂದ್ರ ಮಾಜಿ ಸಚಿವ ಮತ್ತು ಬಿಜೆಪಿ ಪ್ರಭಾವಿ ಧುರೀಣ ಅರುಣ್ ಜೇಟ್ಲಿ(66) ಇನ್ನಿಲ್ಲ. ಕೆಲ ದಿನಗಳಿಂದಲೂ ತೀವ್ರ ಅನಾರೋಗ್ಯದಿಂದ ಬಳಸುತ್ತಿದ್ದ ಜೇಟ್ಲಿ ಇಂದು ಮಧ್ಯಾಹ್ನ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.

ಮೂತ್ರಪಿಂಡ ವೈಫಲ್ಯದಿಂದಾಗಿ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಕೆಲವು ತಿಂಗಳ ಹಿಂದಷ್ಟೇ ಭಾರತಕ್ಕೆ ಮರಳಿದ್ದ ಅವರು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು. ಜೊತೆಗೆ ಅವರಿಗೆ ಕ್ಯಾನ್ಸರ್ ಸಮಸ್ಯೆಯೂ ಉಲ್ಬಣಿಸಿತ್ತು.

ಕೆಲವು ದಿನಗಳ ಹಿಂದೆ ಉಸಿರಾಟದ ತೊಂದರೆ ಮತ್ತು ನಿತ್ರಾಣರಾಗಿದ್ದರಿಂದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಾ ವಿಷಮ ಹಂತ ತಲುಪಿತ್ತು.

ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ಕೇಂದ್ರ ಸಚಿವರು ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದರು.

ನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ಜೇಟ್ಲಿ ಅವರ ಅಂತ್ಯ ಸಂಸ್ಕಾರ ನೆರವೇರಲಿದ್ದು, ದೇಶ-ವಿದೇಶಗಳ ಹಲವಾರು ಗಣ್ಯರು ಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

# ಗಣ್ಯಾತಿ ಗಣ್ಯರ ಸಂತಾಪ:
ಅರುಣ್ ಜೇಟ್ಲಿ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಡಾ.ಎಂ. ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆದ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್,

ಸ್ಮೃತಿ ಇರಾನಿ ಸೇರಿದಂತೆ ಕೇಂದ್ರ ಸಂಪುಟದ ಸದಸ್ಯರು, ಮಾಜಿ ಪ್ರಧಾನಿಗಳಾದ ಡಾ. ಮನಮೋಹನ್ ಸಿಂಗ್, ಎಚ್.ಡಿ.ದೇವೇಗೌಡ, ಯುಪಿಎ ಅಧ್ಯಕ್ಷ ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಗುಲಾಂ ನಬಿ ಅಜಾದ್, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಅನೇಕ ರಾಜಕೀಯ ಪಕ್ಷಗಳ ನಾಯಕರು, ಹಲವಾರು ಕ್ಷೇತ್ರಗಳ ಗಣ್ಯರು ಮತ್ತು ಉದ್ಯಮಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ರಾಜ್ಯವನ್ನು ಪ್ರತಿನಿಧಿಸಿರುವ ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಪ್ರಹ್ಲಾದ್ ಜೋಷಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಮಾಜಿ ಮುಖ್ಯಮಂತ್ರಿಗಳಾದ ಸಿದ್ಯರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ರಾಜ್ಯದ ಅನೇಕ ಗಣ್ಯಾತಿಗಣ್ಯರೂ ಸಹ ಜೇಟ್ಲಿ ನಿಧನಕ್ಕೆ ಸಂತಾಪ ಸೂಚಿಸಿ ಅವರ ಗುಣಗಾನ ಮಾಡಿದ್ದಾರೆ.

Facebook Comments

Sri Raghav

Admin