‘ಅಮೂಲ್ಯ ವಜ್ರ ಕಳೆದುಕೊಂಡೆ’ : ಜೇಟ್ಲಿ ನಿಧನಕ್ಕೆ ಮೋದಿ ಕಂಬನಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.24- ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರುಣ್ ಜೇಟ್ಲಿ ಅಮೂಲ್ಯ ವಜ್ರದಂತಿದ್ದರು.ಎಷ್ಟೋ ಸಂದರ್ಭದಲ್ಲಿ ಮೋದಿ ಜೇಟ್ಲಿ ಅವರನ್ನು ಚಾಣಕ್ಯ, ಮಹಾ ವಿದ್ವಾಂಸ ಮತ್ತು ಅತ್ಯಂತ ಕುಶಲ ಸಚಿವ ಎಂದೇ ಬಣ್ಣಿಸಿದ್ದರು.

ಅರುಣ್ ಜೇಟ್ಲಿ ಬಗ್ಗೆ ಪ್ರಧಾನಿ ಮೋದಿಗೆ ಮೊದಲಿನಿಂದಲೂ ವಿಶೇಷ ಒಲವು. ಅತ್ಯಂತ ವರ್ಚಸ್ಸಿನ ನಾಯಕರಾಗಿದ್ದ ಜೇಟ್ಲಿ ಅವರನ್ನು ವಾಜಪೇಯಿ ಸಹ ಬಹುವಾಗಿ ಮೆಚ್ಚಿಕೊಂಡಿದ್ದರು. ಜೇಟ್ಲಿ ನಿಧನಕ್ಕೆ ಕಂಬನಿ ಮಿಡಿದಿರುವ ಪ್ರಧಾನಿ ಬಹುಮುಖ ಪ್ರತಿಭೆಯ ಆಪ್ತ ಮಿತ್ರನ ಕಳೆದುಕೊಂಡೆ ಎಂದು ಸಂತಾಪ ಸೂಚಿಸಿದ್ದಾರೆ.

# ಎಸ್.ಯಡಿಯೂರಪ್ಪ ಕಂಬನಿ :
ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ನಿಧನರಾದ ಬಿಜೆಪಿ ಹಿರಿಯ ನಾಯಕ ಕೇಂದ್ರ ಮಾಜಿ ಸಚಿವ ಅರುಣ್ ಜೇಟ್ಲಿ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ.

ಜೇಟ್ಲಿ ಅವರ ಅಂತ್ಯ ಸಂಸ್ಕಾರ ನಾಳೆ ಮಧ್ಯಾಹ್ನ ನವದೆಹಲಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ.

ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಪ್ರಮುಖರು ಭಾಗವಹಿಸಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಜೇಟ್ಲಿ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಾಳೆ ಬೆಳಗ್ಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿ ಅಂತ್ಯ ಸಂಸ್ಕಾರದ ವಿಧಿವಿಧಾನಗಳು ಮುಗಿದ ಬಳಿಕ ಸಂಜೆಯೇ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.ಇನ್ನು ಜೇಟ್ಲಿ ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿದಿರುವ ಯಡಿಯೂರಪ್ಪ ಅವರೊಬ್ಬ ದೇಶ ಕಂಡ ಅಪ್ರತಿಮ ನಾಯಕ ಪ್ರತಿಪಕ್ಷಗಳು ಕೂಡ ಮೆಚ್ಚುವಂತಹ ಅಪರೂಪದ ರಾಜಕಾರಣಿಯಾಗಿದ್ದರು.

ಇತ್ತೀಚೆಗೆ ನವದೆಹಲಿಗೆ ತೆರಳಿದ್ದ ವೇಳೆ ಅವರನ್ನು ಭೇಟಿಯಾಗಿದ್ದೆ. ಬಿಜೆಪಿಯಲ್ಲಿ ನಾನು ಮೆಚ್ಚುವ ಅನೇಕ ನಾಯಕರಲ್ಲಿ ಜೇಟ್ಲಿ ಒಬ್ಬರಾಗಿದ್ದರು.ಅನೇಕ ಸಂದರ್ಭಗಳಲ್ಲಿ ನಾನು ಅವರಿಂದ ಸಲಹೆ, ಸೂಚನೆಗಳನ್ನು ಪಡೆದಿದ್ದೇನೆ.

ಈಗ ಅವರು ಇಲ್ಲದಿರುವುದನ್ನು ನೆನಸಿಕೊಳ್ಳಲು ಸಾಧ್ಯವಿಲ್ಲ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು.

Facebook Comments